ಉಡುಪಿಯಲ್ಲಿ ಟೊಮೆಟೊ ಜ್ವರ ವದಂತಿ: ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಸ್ಪಷ್ಟನೆ

Update: 2022-05-16 12:42 GMT
ಸಾಂದರ್ಭಿಕ ಚಿತ್ರ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಈವರೆಗೆ ಟೊಮೇಟೊ ಜ್ವರ ಪತ್ತೆ ಆಗಿಲ್ಲ. ಈ ಬಗ್ಗೆ ಅನಗತ್ಯ ಗೊಂದಲ ಬೇಡ ಎಂದು ಉಡುಪಿ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದ್ದಾರೆ.

ಉಡುಪಿಯಲ್ಲಿ ಟೊಮೆಟೊ ಜ್ವರ ವದಂತಿ ಬಗ್ಗೆ ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಈ ರೀತಿ ಸ್ಪಷ್ಟನೆ ನೀಡಿದ್ದಾರೆ. ಮಕ್ಕಳಲ್ಲಿ ಕಾಲುಬಾಯಿ ರೋಗ ಬರುವುದು ಸಾಮಾನ್ಯ. ಜನವರಿ- ಫೆಬ್ರವರಿ ತಿಂಗಳಿಂದಲೇ ಈ ಸೋಂಕು ಮಕ್ಕಳಲ್ಲಿ ಇತ್ತು. ಈ ಮೊದಲೇ ಇದರ ಮಾದರಿ  ತೆಗೆದು ಪರೀಕ್ಷೆ ನಡೆಸಿದ್ದೇವೆ. ಉಡುಪಿಯಲ್ಲಿ ಪತ್ತೆಯಾಗಿರುವುದು ಕಾಲು ಬಾಯಿ ರೋಗವೇ ಎಂದು ಖಾತ್ರಿಯಾಗಿದೆ ಎಂದರು.

ಉಡುಪಿಯಲ್ಲಿ ಪತ್ತೆಯಾಗಿರುವುದು ಟೊಮೆಟೋ ಜ್ವರ ಮತ್ತೊಂದು ಪ್ರಭೇದವಾಗಿದೆ. ಟೊಮೆಟೊ ಜ್ವರ ಕೂಡ ಇದೇ ರೀತಿ ಬರುತ್ತದೆ. ಜ್ವರ ಮತ್ತು ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಕಾಲು ಬಾಯಿ ರೋಗದಲ್ಲಿ ಚಿಕ್ಕ ಗುಳ್ಳೆಗಳು ಕಂಡುಬಂದರೆ, ಟೊಮೇಟೊ ಫ್ಲೂನಲ್ಲಿ ದೊಡ್ಡಗಾತ್ರದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಅದನ್ನು ಟೊಮೆಟೋ ಜ್ವರ ಎಂದು ಕರೆಯುತ್ತಾರೆ ಎಂದು ಅವರು ಹೇಳಿದರು.

ಈ ರೀತಿಯಲ್ಲಿನ ಟೊಮೆಟೋ ಜ್ವರ ಪ್ರಕರಣಗಳು ನಮ್ಮಲ್ಲಿ ಯಾವುದೇ ಕಂಡು ಬಂದಿಲ್ಲ. ಕೊರೋನ ಸಮಯದಲ್ಲಿ ನಾವು ಈ ಬಗ್ಗೆ ವಿಶೇಷ ಗಮನ ಹರಿಸಿದ್ದೆವು. ಮಕ್ಕಳ ತಜ್ಞರಿಂದ ಮಾಹಿತಿ ಪಡೆದು ಮಾದರಿ ತೆಗೆದಿದ್ದೆವು. ಉಡುಪಿಯಲ್ಲಿ ಪತ್ತೆಯಾಗಿರುವುದು ಫ್ಲೂ ಎಂದು ಗೊತ್ತಾಗಿದೆ. ಮಣಿಪಾಲ ಕೆಎಂಸಿಯಲ್ಲೂ ವಿಚಾರಣೆ ನಡೆಸಿದ್ದೇವೆ. ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಟೊಮೆಟೋ ಜ್ವರ ಪತ್ತೆಯಾಗಿಲ್ಲ. ಟೊಮೆಟೋ ಜ್ವರ ಬಗ್ಗೆ ಪೋಷಕರು ಎಚ್ಚರವಾಗಿರಬೇಕೆ ಹೊರತು ಆತಂಕ ಪಡುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.

ಮಕ್ಕಳಲ್ಲಿ ಜ್ವರ ಮೈಮೇಲೆ ಗುಳ್ಳೆಗಳು ಕಂಡು ಬಂದರೆ ಶಾಲೆಗೆ ಕಳುಹಿಸಬೇಡಿ. ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಚಿಕನ್ ಪಾಕ್ಸ್ ಆದರೆ ಇದೇ ರೀತಿ ಹಬ್ಬುತ್ತದೆ. ಅದೇ ರೀತಿ ಟೊಮೆಟೊ ಜ್ವರ ಕೂಡ ಹಬ್ಬ ಬಹುದು. ಐದಾರು ದಿನದ ಚಿಕಿತ್ಸೆಯಿಂದ ಗುಣವಾಗುತ್ತದೆ.  ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಸಮಸ್ಯೆ ಆಗುತ್ತದೆ. ಮಕ್ಕಳಿಗೆ ನಿರ್ಜಲಿಕರಣ ಆಗದಂತೆ ನೋಡಿಕೊಳ್ಳಬೇಕು. ಟೊಮೆಟೊ ಫ್ಲೂನಲ್ಲಿ ಮೈಮೇಲೆ ಗುಳ್ಳೆಗಳು ಕಂಡು ಬಂದರೆ ಉಜ್ಜಬಾರದು ಎಂದರು.

ಎಲ್ಲ ವೈದ್ಯಾಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದೇವೆ. ಆಶಾ ಕಾರ್ಯಕರ್ತೆಯರಿಗೆ ಕೂಡ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದೇವೆ. ಕೇರಳದಿಂದ ಬರುವ ಪ್ರವಾಸಿಗರ ಹಾಗೂ ರೋಗಿಗಳ ಬಗ್ಗೆ ಗಮನ ಹರಿಸಲಾಗಿದೆ. ಕೊಲ್ಲೂರು ಭಾಗದಲ್ಲಿ ವಿಶೇಷ ನಿಗಾ ಇರಿಸಲಾಗಿದೆ ಎಂದು ಡಾ. ನಾಗರತ್ನ ಹೇಳಿದರು.

"ಉಡುಪಿಯಲ್ಲಿ ಕಂಡುಬಂದಿರುವ ಕಾಲುಬಾಯಿ ರೋಗಕ್ಕೂ ಟೊಮೆಟೊ ಫ್ಲೂಗೂ ಯಾವುದೇ ಸಂಬಂಧ ಇಲ್ಲ. ಕಾಲುಬಾಯಿ ರೋಗದ ಬಗ್ಗೆ ನಾವು ಈ ಹಿಂದೆ ಕೂಡ  ವರದಿ ಮಾಡಿದ್ದೇವೆ. ಆದರೂ ಕೂಡ ಈ ಬಗ್ಗೆ ಪರಿಶೀಲನೆ ನಡೆಸಲು ತಿಳಿಸಿದ್ದೇನೆ. ಅದೇ ರೀತಿ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ. ಕೇರಳದಲ್ಲಿ ಟೊಮೆಟೊ ಫ್ಲೂ ಪ್ರಕರಣ ಕಂಡುಬಂದಿರುವುದರಿಂದ ನಮ್ಮ ಜಿಲ್ಲೆಯ ಎಲ್ಲ ಮಕ್ಕಳಿಗೆ ತಜ್ಞರಿಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಟೊಮೆಟೊ ಫ್ಲೂ ಲಕ್ಷ್ಮಣಗಳಿರುವ ಜ್ವರ ಕಂಡುಬಂದರೆ ಕೂಡಲೇ ಗಮನಕ್ಕೆ ತರುವಂತೆ ಸೂಚಿಸಲಾಗಿದೆ".

-ಕೂರ್ಮಾರಾವ್, ಉಡುಪಿ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News