ಕೇರಳದಲ್ಲಿ ಟ್ವೆಂಟಿ-20 ಜೊತೆಗೆ ಕೈಜೋಡಿಸಿದ ಆಮ್‌ ಆದ್ಮಿ ಪಕ್ಷ; ಪೀಪಲ್ಸ್ ವೆಲ್ಫೇರ್ ಅಲಾಯನ್ಸ್ ಸ್ಥಾಪನೆ

Update: 2022-05-16 12:49 GMT
Photo: Twitter

ತಿರುವನಂತಪುರಂ: ಆಮ್ ಆದ್ಮಿ ಪಕ್ಷ ಮತ್ತು  ಕೇರಳದ ಪ್ರಮುಖ ಗಾರ್ಮೆಂಟ್ ಕಂಪೆನಿ ಕೈಟೆಕ್ಸ್ ಗ್ರೂಪ್ ಇದರ ಸಿಎಸ್‍ಆರ್ ಘಟಕವಾಗಿರುವ ಟ್ವೆಂಟಿ20 ಇಂದು ಪೀಪಲ್ಸ್ ವೆಲ್ಫೇರ್ ಅಲಾಯನ್ಸ್ ಎಂಬ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿವೆ.

ಈ ಘೋಷಣೆಯನ್ನು ಇಂದು ಕೊಚ್ಚಿ ಸಮೀಪದ ಕಿಝಕ್ಕಂಬಲಂ ಎಂಬಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕೈಟೆಕ್ಸ್ ಕಂಪೆನಿಯ ಎಂಡಿ ಆಗಿರುವ ಸಾಬು ಎಂ ಜೇಕಬ್ ಜಂಟಿಯಾಗಿ ಘೋಷಿಸಿದರು.

ನಂತರ ಮಾತನಾಡಿದ ಕೇಜ್ರಿವಾಲ್, ಕೇರಳದ ಜನತೆಯ ಮುಂದೆ ಎರಡು ಆಯ್ಕೆಗಳಿವೆ, ಕ್ರಿಮಿನಲ್ ಚಟುವಟಿಕೆಗಳಲ್ಲಿ ಹಾಗೂ ಹಿಂಸಾಚಾರಗಳಲ್ಲಿ ತೊಡಗುವ ರಾಜಕೀಯ ಪಕ್ಷಗಳನ್ನು ಆರಿಸುವುದು ಅಥವಾ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಆಪ್ ಮತ್ತು ಟ್ವೆಂಟಿ20 ಇವುಗಳ ಪಕ್ಷವನ್ನು ಆರಿಸುವುದಾಗಿದೆ, ಜನರು ಸರಿಯಾದ ಆಯ್ಕೆ ಮಾಡಬೇಕು. ಅಭಿವೃದ್ಧಿ ಮತ್ತು ಉತ್ತಮ ಜೀವನ ಬೇಕಿದ್ದವರು ಈ ಮೈತ್ರಿಕೂಟವನ್ನು ಆರಿಸಬೇಕು,'' ಎಂದು ಅವರು ಹೇಳಿದರು.

ಕೇರಳದಲ್ಲಿ ಆಪ್‍ನ ಹೊಸ ಪಾಲುದಾರನಾಗಿರುವ ಟ್ವೆಂಟಿ20 ಎರ್ಣಾಕುಳಂ ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯತುಗಳಲ್ಲಿ ಆಯ್ಕೆಯಾಗಿ ಆಡಳಿತ ನಡೆಸುತ್ತಿದೆ.

ಕೈಟೆಕ್ಸ್ ಮುಖ್ಯಸ್ಥ ಹಾಗೂ ಟ್ವೆಂಟಿ20 ಸಂಘಟಕ ಸಾಬು ಎಂ ಜೇಕಬ್ ಮಾತನಾಡಿ  ತಮ್ಮ ಹೊಸ ಪಕ್ಷ ಜನರ ಶಾಂತಿಯುತ ಜೀವನಕ್ಕಾಗಿ ಕೆಲಸ ಮಾಡಲಿದೆ ಎಂದರು.

ರಾಜ್ಯ ಸರಕಾರದ ಪ್ರಸ್ತಾವಿತ ಕೆ-ರೈಲ್ ಯೋಜನೆಯನ್ನು ಖಂಡಿಸಿದ ಅವರು "ರಾಜ್ಯದ ಸರಕಾರಿ ಸಾರಿಗೆ ಸಂಸ್ಥೆಯನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಿಲ್ಲದ ಸರಕಾರ ಈ ರೂ 62,000 ಕೋಟಿ ಯೋಜನೆಯನ್ನು ಹೇಗೆ ನಿಭಾಯಿಸಲಿದೆ" ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News