ಎಂಬಿಎ ಪದವೀಧರೆ ಸಹನಾ ಆತ್ಮಹತ್ಯೆಗೆ ಸರಕಾರವೇ ನೇರ ಹೊಣೆ: ಕಾಂಗ್ರೆಸ್ ಆರೋಪ

Update: 2022-05-16 13:51 GMT

ಉಡುಪಿ : ಉದ್ಯೋಗ ಸಿಗದೆ ಮೂಡುಬೆಳ್ಳೆಯ ಬಡ ಕುಟುಂಬದ ಎಂಬಿಎ ಪದವೀಧರೆ ಸಹನಾ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಜಾತಂತ್ರ ವ್ಯವಸ್ಥೆಯ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಆತ್ಮಹತ್ಯೆ ಪ್ರಕರಣಕ್ಕೆ ಸರಕಾರವೇ ನೇರ ಹೊಣೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತಳು ತನ್ನ ಮರಣಪತ್ರದಲ್ಲಿ ನನ್ನ ಸಾವಿಗೆ ನಿರುದ್ಯೋಗವೇ ಕಾರಣ ಎಂದು ಬರೆದಿದ್ದಾಳೆ. ಸರಕಾರದ ಯುವ ಸಬಲೀಕರಣದ ಹುಸಿ ಭರವಸೆಗಳು ವಿದ್ಯಾ ವಂತ ಯುವ ಜನತೆಯನ್ನು ಆತ್ಮಹತ್ಯೆಯ ಪಥದತ್ತ ತಳ್ಳುತ್ತಿದೆ. ಬಿಜೆಪಿ ಸರಕಾರದ ಆಡಳಿತದಲ್ಲಿ ಇದೆಲ್ಲ ಸಾಮಾನ್ಯವಾಗಿದ್ದು, ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ದೂರಿದರು.

ಮೋದಿ ಅಧಿಕಾರಿಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ಹುಸಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ 40 ಸಾವಿರ ಯುವ ಜನತೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಪ್ರಸಕ್ತ ಮೋದಿ ಆಡಳಿತದಲ್ಲಿ ಪ್ರತಿ ಒಂದು ಗಂಟೆಗೆ ಒಬ್ಬರು ವಿದ್ಯಾವಂತ ಯುವಜನತೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಇವರಲ್ಲಿ ಸಹನಾ ದೇವಾಡಿಗ ಒಬ್ಬರಾಗಿದ್ದಾರೆ. ಇದಕ್ಕೆ ಕಾರಣ ಮೋದಿ ಸರಕಾರದ ಅವೈಜ್ಞಾನಿಕ ಆರ್ಥಿಕ ಹಾಗೂ ಆಡಳಿತ ನೀತಿ. ಆದುದರಿಂದ ಸರಕಾರ ಸಹನಾ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕುಶಲ್ ಶೆಟ್ಟಿ, ಬಿಪಿನ್‌ಚಂದ್ರ ಪಾಲ್ ನಕ್ರೆ, ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News