ನೆರೆಯಿಂದ ತತ್ತರಿಸಿರುವ ಅಸ್ಸಾಂ:ಸಾವಿರಾರು ಜನರು ಸಂಕಷ್ಟದಲ್ಲಿ

Update: 2022-05-16 15:12 GMT
PHOTO:TWITTER/@PBNS_India

ಗುವಾಹಟಿ,ಮೇ 16: ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಮತ್ತು ನೆರೆಯಿಂದ ಅಸ್ಸಾಂ ತತ್ತರಿಸಿದ್ದು,ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಕೆಲವೆಡೆಗಳಲ್ಲಿ ಭೂಕುಸಿತಗಳು ವರದಿಯಾಗಿವೆ.

ನಿರಂತರ ಮಳೆಯಿಂದಾಗಿ 12 ಗ್ರಾಮಗಳಲ್ಲಿ ಭೂಕುಸಿತಗಳು ಸಂಭವಿಸಿವೆ. ಕಾಚಾರ್ ಜಿಲ್ಲೆಯಲ್ಲಿ ನೆರೆ ಸ್ಥಿತಿಯು ಗಂಭೀರವಾಗಿದ್ದು ಒಂದು ಮಗು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಶನಿವಾರ ದಿಮಾ ಹಸಾವೊ ಜಿಲ್ಲೆಯ ಹಫ್ಲಾಂಗ್ ಎಂಬಲ್ಲಿ ಭೂಕುಸಿತಗಳಿಂದಾಗಿ ಓರ್ವ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದರು. ಭೂಕುಸಿತಗಳು ಮತ್ತು ಹಲವಾರು ಪ್ರದೇಶಗಳು ಜಲಾವೃತಗೊಂಡಿರುವುದರಿಂದ ರೈಲ್ವೆ ಹಳಿಗಳು,ಸೇತುವೆಗಳು ಮತ್ತು ರಸ್ತೆಗಳಿಗೆ ತೀವ್ರ ಹಾನಿಯುಂಟಾಗಿದೆ.ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ,ಅಗ್ನಿಶಾಮಕ ಇಲಾಖೆ,ತುರ್ತು ಸೇವೆಗಳ ವಿಭಾಗ ಇತ್ಯಾದಿಗಳು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿದ್ದು,ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ನೆರವಾಗುತ್ತಿವೆ.ನಿರಂತರ ಮಳೆಯಿಂದಾಗಿ ಅಸ್ಸಾಮಿನ ಏಳು ಜಿಲ್ಲೆಗಳಲ್ಲಿಯ 57,000ಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

15 ಕಂದಾಯ ವಲಯಗಳಡಿಯ ಸುಮಾರು 222 ಗ್ರಾಮಗಳು ನೆರೆಯಿಂದ ತತ್ತರಿಸಿದ್ದು,ಸುಮಾರು 10,321.44 ಹೆಕ್ಟೇರ್ ಕೃಷಿಭೂಮಿ ನೀರಿನಲ್ಲಿ ಮುಳುಗಿದೆ. ರಾಜ್ಯದಲ್ಲಿಯ ಸಾವಿರಾರು ಪ್ರಾಣಿಗಳೂ ನೆರೆಯಿಂದ ಬಾಧಿತಗೊಂಡಿವೆ. ಈವರೆಗೆ 200ಕ್ಕೂ ಅಧಿಕ ಮನೆಗಳು ಮತ್ತು ವಸತಿ ಪ್ರದೇಶಗಳಿಗೆ ಹಾನಿಯಾಗಿದೆ.ಭಾರೀ ಭೂಕುಸಿತಗಳು ಮತ್ತು ನೆರೆಯಿಂದಾಗಿ ಹಲವಾರು ಪ್ರಯಾಣಿಕರು ದಿತೋಕಚೇರಾ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದು,ಈ ಪೈಕಿ 119 ಪ್ರಯಾಣಿಕರನ್ನು ಭಾರತೀಯ ವಾಯು ಪಡೆಯು ಸಿಲ್ಚಾರ್ಗೆ ಸಾಗಿಸಿದೆ. ಉಳಿದವರನ್ನು ಬದರ್ಪುರ ಮತ್ತು ಇತರ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News