ಕಲಿಕೆಯಲ್ಲಿ ವೈಕಲ್ಯವಿರುವ ವಿದ್ಯಾರ್ಥಿಗೆ ಪದವಿ ನೀಡುವಂತೆ ಐಐಟಿಗೆ ಸುಪ್ರೀಂಕೋರ್ಟ್ ಆದೇಶ‌

Update: 2022-05-16 15:25 GMT

ಹೊಸದಿಲ್ಲಿ,ಮೇ 16: ಕಲಿಕೆಯಲ್ಲಿ ವೈಕಲ್ಯದಿಂದ ನರಳುತ್ತಿರುವ ವಿದ್ಯಾರ್ಥಿಯೋರ್ವನಿಗೆ ಮಾಸ್ಟರ್ ಇನ್ ಡಿಸೈನ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ ಎಂದು ಘೋಷಿಸಿ ಪದವಿಯನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಐಐಟಿ-ಬಾಂಬೆಗೆ ಆದೇಶಿಸಿದೆ.

ಅರ್ಜಿದಾರ ನಮನ್ ವರ್ಮಾ ಅವರಿಗೆ ಪದವಿ ಪ್ರಮಾಣಪತ್ರ ಮತ್ತು ಇತರ ಎಲ್ಲ ದಾಖಲೆಗಳನ್ನು ನಾಲ್ಕು ವಾರಗಳಲ್ಲಿ ಹಸ್ತಾಂತರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಯು.ಯು.ಲಲಿತ್,ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಮೇ 11ರ ತನ್ನ ಆದೇಶದಲ್ಲಿ ಐಐಟಿ-ಬಾಂಬೆಗೆ ತಿಳಿಸಿದೆ.

‘ಡಿಸ್‌ಕ್ಯಾಲ್ಕುಲಿಯಾ’ಎಂದು  ಕರೆಯಲಾಗುವ ಕಲಿಕೆ ವೈಕಲ್ಯದಿಂದ ನರಳುತ್ತಿರುವ ವರ್ಮಾ 2013ರ ತಂಡದ ಇನ್ ಡಿಸೈನ್ ಕೋರ್ಸ್‌ಗೆ  ತನಗೆ ಪ್ರವೇಶ ನೀಡುವಂತೆ ಸಂವಿಧಾನದ 226ನೇ ವಿಧಿಯಡಿ ಐಐಟಿ-ಬಾಂಬೆಗೆ ನಿರ್ದೇಶನ ನೀಡುವಂತೆ ಬಾಂಬೆ ಉಚ್ಚ ನ್ಯಾಯಾಲಯವನ್ನು ಕೋರಿಕೊಂಡಿದ್ದು,ಅವರನ್ನು ಕೋರ್ಸ್‌ಗೆ  ದಾಖಲಿಸಿಕೊಳ್ಳುವಂತೆ ಅದು ಮಧ್ಯಂತರ ಅದೇಶವನ್ನು ನೀಡಿತ್ತು.

ಈ ನಡುವೆ ವರ್ಮಾ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವರ ಅರ್ಜಿಯನ್ನು ಅಂತಿಮ ಇತ್ಯರ್ಥಕ್ಕಾಗಿ ಕೈಗೆತ್ತಿಕೊಂಡಿದ್ದ ಉಚ್ಚ ನ್ಯಾಯಾಲಯವು ಹಲವಾರು ಅಂಶಗಳನ್ನು ಪರಿಗಣಿಸಿದ ಬಳಿಕ ಅವರ ಕೋರಿಕೆಯನ್ನು ತಿರಸ್ಕರಿಸಿತ್ತು.ಬಾಂಬೆ ಉಚ್ಚ ನ್ಯಾಯಾಲಯದ 2018,ಎ.17ರ ಆದೇಶವನ್ನು ಪ್ರಶ್ನಿಸಿ ವರ್ಮಾ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News