ಮೇ 20ರಂದು ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ

Update: 2022-05-16 16:20 GMT

ಉಡುಪಿ, ಮೇ ೧೬: ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣ ವಾಗಿ ಮೀಸಲಾತಿ ಪ್ರಮಾಣವನ್ನು ಶೇ.೭.೫ರಷ್ಟು ಹೆಚ್ಚಿಸುವಂತೆ ಆಗ್ರಹಿಸಿ ಮೇ ೨೦ರಂದು ಮಣಿಪಾಲ ಟೈಗಲ್ ಸರ್ಕಲ್‌ನಿಂದ ಉಡುಪಿ ಜಿಲ್ಲಾಧಿಕಾರಿ  ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಉಡುಪಿ ತಿಳಿಸಿದೆ.

ಉಡುಪಿಯಲ್ಲಿಂದು ಪರಿಶಿಷ್ಟ ಪಂಗಡಗಳಾದ ಮರಾಟಿ ನಾಯ್ಕ, ಮಲೆ ಕುಡಿಯ ಹಾಗೂ ಕೊರಗ ಸಂಘಟನೆಗಳ ಮುಖಂಡರು ಜಂಟಿಯಾಗಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೆರವಣಿಗೆ ಬಳಿಕ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಸಂಬಂಧ ಸರಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಸತ್ಯಾಗ್ರಹ ಮಾಡಲಾಗುವುದು ಎಂದು  ಕೊರಗ ಮುಖಂಡ ಗಣೇಶ್ ಕೊರಗ ಎಚ್ಚರಿಕೆ ನೀಡಿದರು.  

ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಒಟ್ಟು ೫೦ ಬುಡಕಟ್ಟುಗಳನ್ನು ಗುರುತಿಸ ಲಾಗಿದೆ. ೧೯೫೮ರ ನಂತರ ನಡೆದ ೧೯೬೧ರ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ ೧,೯೨,೦೯೬ರಷ್ಟಿದ್ದು, ಇದು ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.೦.೮೧ ರಷ್ಟಿದೆ. ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದವರಿಗೆ ಸರಕಾರ ಶೇ.೩ರ ಮೀಸಲಾತಿ ಪ್ರಮಾಣವನ್ನು ನಿಗದಿ ಪಡಿಸಿತ್ತು. ಮುಂದಿನ ಐದು ಜನಗಣತಿ ಯಲ್ಲಿ ಜನಸಂಖ್ಯೆ ಹೆಚ್ಚಾಗಿ ೨೦೧೧ರಲ್ಲಿ ೪೨,೪೮,೯೮೭ ಆಗಿತ್ತು. ಅಂದರೆ ಪರಿಶಿಷ್ಟ ಪಂಗಡದವರ ಜನಸಂಖ್ಯೆ ೧೯೬೧ರ ಜನಗಣತಿಗೆ ಹೋಲಿಸಿದ್ದಲ್ಲಿ ೨೨.೧೧ರಷ್ಟು ಹೆಚ್ಚಾಗಿದೆ ಎಂದು ಮರಾಟಿ ನಾಯ್ಕ್ ಸಂಘಟನೆ ಜಿಲ್ಲಾಧ್ಯಕ್ಷ ಅನಂತ ನಾಯ್ಕ ತಿಳಿಸಿದರು.

೧೯೫೮ರಲ್ಲಿ ನಿಗದಿಯಾಗಿದ ಮೀಸಲಾತಿ ಶೇ.೩ರ ಪ್ರಮಾಣ ಇಂದು ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಿದ್ದರೂ ಮೀಸಲಾತಿ ಪ್ರಮಾಣ ಶೇ.೩ರಷ್ಟೇ ಇದೆ. ಆದುದರಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಶೇ.೭.೫ರಷ್ಟು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ರಾಜಧಾನಿಯಲ್ಲಿ ಹೋರಾಟ ಸಕ್ರಿಯವಾಗಿದ್ದು, ಉಡುಪಿ  ಜಿಲ್ಲೆಯಲ್ಲಿಯೂ ಕೂಡ ಈ ಕುರಿತು ಹೋರಾಟ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೊರಗ ಸಂಘಟನೆಯ ಮುಖಂಡರಾದ ಗೌರಿ ಕೆಂಜೂರು, ಕುಮಾರ್‌ದಾಸ್, ಮಲೆಕುಡಿಯ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ, ಮರಾಟಿ ನಾಯ್ಕ ಸಂಘಟನೆ ಮುಖಂಡರಾದ ಭೋಜ ನಾಯ್ಕ, ಜಯರಾಮ ನಾಯ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News