"ಗೋವನ್ನು ಕೊಲ್ಲಬಾರದೆಂಬ ನಿಯಮವೇ ನಮ್ಮಲ್ಲಿಲ್ಲ" ಎಂದಿದ್ದ ಮಲಯಾಳಂ ನಟಿ ನಿಖಿಲಾ ವಿಮಲ್‌ ಗೆ ಗಣ್ಯರ ಬೆಂಬಲ

Update: 2022-05-16 17:47 GMT
Photo: Facebook/Nikhila Vimal

ಕೊಚ್ಚಿ: ತಾನು ನಟಿಸಿರುವ ಹೊಸ ಚಿತ್ರ ಜೋ ಆಂಡ್‌ ಜೋ ಸಿನಿಮಾದ ಪ್ರಚಾರದ ಸಲುವಾಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ನಿರೂಪಕ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಮಲಯಾಳಂ ಸಿನಿಮಾ ನಟಿ ನಿಖಿಲಾ ವಿಮಲ್‌ ಗೋಹತ್ಯೆ ವಿಚಾರಕ್ಕೆ ಸಂಬಂಧಿಸಿ ತಮ್ಮ ಸ್ಪಷ್ಟವಾದ ನಿಲುವನ್ನು ತಿಳಿಸಿದ್ದರು. ಈ ಹೇಳಿಕೆ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ಬಲಪಂಥೀಯ ಟ್ರೋಲ್‌ ಗಳು ಅವರನ್ನು ಗುರಿಪಡಿಸಿವೆ. ಈ ನಡುವೆ ಹಲವು ಮಂದಿ ಅವರ ಬೆಂಬಲಕ್ಕೂ ನಿಂತಿದ್ದಾರೆ.

ಸಂದರ್ಶನದ ಸಂದರ್ಭದಲ್ಲಿ "ಈ ದೇಶದಲ್ಲಿ ಗೋವನ್ನು ತಿನ್ನಬಾರದೆಂದು ಯಾರೂ ಇನ್ನೊಬ್ಬರ ಮೇಲೆ ತಮ್ಮ ಅಭಿಪ್ರಾಯವನ್ನು ಹೇರಿಕೆ ಮಾಡಲಾಗದು. ಇಲ್ಲಿ ಗೋವನ್ನು ಕೊಲ್ಲಬಾರದೆಂಬ ನಿಯಮವೇ ಇಲ್ಲ. ಅಳಿವಿನಂಚಿನಲ್ಲಿರುವ ಪ್ರಾಣಿಗಳು ಎಂಬ ಕಾರಣಕ್ಕೆ ಕೆಲ ಕಾಡುಮೃಗಗಳನ್ನು ಕೊಲ್ಲಬಾರದೆಂಬ ನಿಯಮವಿದೆ. ಗೋವಿಗೆ ಅಂತಹಾ ಪ್ರತ್ಯೇಕ ಪರಿಗಣನೆ ಏನೂ ಇಲ್ಲ. ಪ್ರಾಣಿದಯೆಯ ವಿಚಾರ ಮುಂದಿಡುವುದಾದರೆ ಒಂದೇ ನಿಯಮ ಎಲ್ಲ ಪ್ರಾಣಿಗಳಿಗೂ ಅನ್ವಯವಾಗಬೇಕು. ಒಂದೋ ಯಾವ ಪ್ರಾಣಿಯನ್ನೂ ವಧಿಸಕೂಡದು ಅಥವಾ ಆಹಾರವಾಗಿ ಬಳಸಲ್ಪಡುವ ಎಲ್ಲಾ ಪ್ರಾಣಿಗಳನ್ನೂ ವಧಿಸುವ ಅನುಮತಿ ಕೊಡಲೇಬೇಕು. ನಾನಂತೂ ನನಗಿಷ್ಟವಾದ ಎಲ್ಲಾ ಮಾಂಸಗಳನ್ನು ಸೇವಿಸುತ್ತೇನೆ" ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆದ ಬೆನ್ನಿಗೆ ಅವರ ವಿರುದ್ಧ ವ್ಯಾಪಕ ಟ್ರೋಲ್‌ ಗಳು ಮತ್ತು ನಿಂದನೆಗಳು ಆರಂಭವಾಗಿದ್ದವು. ಈ ಹಿನ್ನೆಲೆಯಲ್ಲಿ ಹಲವು ಗಣ್ಯರು ಕೂಡಾ ಅವರ ಹೇಳಿಕೆಗೆ ಬೆಂಬಲ ಸೂಚಿಸಿದ್ದಾರೆ. 

“ಇಂತಹ ಹೇಳಿಕೆಗಳಿಂದ ಸಿಟ್ಟಾಗುವವರು ನಿಮ್ಮ ವಿರುದ್ಧ ತಮ್ಮ ಸೈಬರ್ ಗೂಂಡಾಗಳನ್ನು ಛೂ ಬಿಡುತ್ತಾರೆ. ಹಾಗಿದ್ದರೂ ನೀವು ಸ್ವಲ್ಪವೂ ಚಿಂತಿಸಬೇಕಾಗಿಲ್ಲ. ಇದು ಕೇರಳ! ಅವರು ನಿಮ್ಮ ಮೇಲೆ ಎಷ್ಟೇ ಮಾಲಿನ್ಯ ಎಸೆದರೂ, ನಿಮ್ಮೊಂದಿಗೆ ನಿಂತಿರುವವರ ಬೆಂಬಲವು ಸಾಕಷ್ಟು ಪ್ರಬಲವಾಗಿದೆ. ಹಾಗಾಗಿ, ನಿಯಮಿತವಾಗಿ ಸೈಬರ್ ದಾಳಿಯನ್ನು ಎದುರಿಸುತ್ತಿರುವ ವ್ಯಕ್ತಿಯಾಗಿ, ಈ ಬಗ್ಗೆ ಅಸಮಾಧಾನಗೊಳ್ಳಬೇಡಿ ಎಂಬುದು ನನ್ನ ಸಲಹೆ ಎಂದು ಹಿರಿಯ ನಟಿ ಮಾಲಾ ಪಾರ್ವತಿ ಬರೆದಿದ್ದಾರೆ.

ಮಲಯಾಳಂನ ಖ್ಯಾತ ಬರಹಗಾರ ಎಂ.ಮುಕುಂದನ್‌ ಅವರೂ ನಿಖಿಲಾ ವಿಮಲ್‌ ಬೆನ್ನಿಗೆ ನಿಂತಿದ್ದು, "ಗೋವು ಎಂಬ ಸಾಧು ಪ್ರಾಣಿಯ್ನನು ಈಗ ಭಯಾನಕ ಪ್ರಾಣಿಯನ್ನಾಗಿಸಿದ್ದಾರೆ. ಗೋವು ಎಂಬ ಹೆಸರು ಕೇಳುವಾಗಲೇ ಎಲ್ಲಿ ಕೋಮುಗಲಭೆ ಉಂಟಾಗುತ್ತದೆಯೋ ಎಂಬ ಭಯವುಂಟಾಗುತ್ತಿದೆ" ಎಂದು ಕಾರ್ಯಕ್ರಮವೊಂದರಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಸಾಮಾಜಿಕ ತಾಣದಲ್ಲೂ ಹಲವರು ನಿಖಿಲಾ ವಿಮಲ್‌ ಹೇಳಿಕೆಯನ್ನು ಪ್ರಶಂಸಿಸಿದರೆ, ಇನ್ನು ಕೆಲವರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News