ಐಪಿಎಲ್: ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ 17 ರನ್ ಜಯ

Update: 2022-05-16 18:00 GMT
ಕುಲದೀಪ್ ಯಾದವ್, Photo:twitter

 ನವಿಮುಂಬೈ, ಮೇ 16: ಶಾರ್ದೂಲ್ ಠಾಕೂರ್(4-36)ನೇತೃತ್ವದ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು 17 ರನ್‌ಗಳ ಅಂತರದಿಂದ ಕಳೆದುಕೊಂಡಿತು.

ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ 64ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 160 ರನ್ ಗುರಿ ಪಡೆದ ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು.

ಪಂಜಾಬ್ ಪರ ಜಿತೇಶ್ ಶರ್ಮಾ(44 ರನ್, 34 ಎಸೆತ, 3 ಬೌಂಡರಿ, 2 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಜಾನಿ ಬೈರ್‌ಸ್ಟೋವ್(28 ರನ್), ಶಿಖರ್ ಧವನ್(19 ರನ್)ಹಾಗೂ ರಾಹುಲ್ ಚಹಾರ್(ಔಟಾಗದೆ 25)ಎರಡಂಕೆಯ ಸ್ಕೋರ್ ಗಳಿಸಿದರು.

ಡೆಲ್ಲಿ ಪರ ಶಾರ್ದೂಲ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಅಕ್ಷರ್ ಪಟೇಲ್(2-14) ಹಾಗೂ ಕುಲದೀಪ್ ಯಾದವ್(2-14) ತಲಾ ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ತಂಡವು ಅಗ್ರ ಸರದಿಯ ಬ್ಯಾಟರ್ ಮಿಚೆಲ್ ಮಾರ್ಷ್(63 ರನ್, 48 ಎಸೆತ, 4 ಬೌಂಡರಿ, 3 ಸಿಕ್ಸರ್)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.

ಡೆಲ್ಲಿ ಪರ ಸರ್ಫರಾಝ್ ಖಾನ್(32 ರನ್, 16 ಎಸೆತ, 5 ಬೌಂಡರಿ, 1 ಸಿಕ್ಸರ್), ಲಲಿತ್ ಯಾದವ್(24 ರನ್, 21 ಎಸೆತ)ಹಾಗೂ ಅಕ್ಷರ್ ಪಟೇಲ್(ಔಟಾಗದೆ 17, 20 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ತಾನೆದುರಿಸಿದ ಮೊದಲ ಎಸೆತದಲ್ಲೇ ಲಿವಿಂಗ್‌ಸ್ಟೋನ್‌ಗೆ ವಿಕೆಟ್ ಒಪ್ಪಿಸಿದರು.
 
 ಆಗ ಎರಡನೇ ವಿಕೆಟ್‌ಗೆ 51 ರನ್ ಜೊತೆಯಾಟ ನಡೆಸಿದ ಮಾರ್ಷ್ ಹಾಗೂ ಸರ್ಫರಾಝ್ ತಂಡವನ್ನು ಆಧರಿಸಿದರು. ಸರ್ಫರಾಝ್ ಔಟಾದ ಬಳಿಕ ಲಲಿತ್ ಯಾದವ್ ಜೊತೆಗೆ ಕೈಜೋಡಿಸಿದ ಮಾರ್ಷ್ 3ನೇ ವಿಕೆಟ್‌ಗೆ 47 ರನ್ ಜೊತೆಯಾಟ ನಡೆಸಿದರು.

ಮಾರ್ಷ್ 19ನೇ ಓವರ್‌ನಲ್ಲಿ ರಬಾಡಗೆ ವಿಕೆಟ್ ಒಪ್ಪಿಸುವ ಮೊದಲು ಅಕ್ಷರ್ ಪಟೇಲ್‌ರೊಂದಿಗೆ 37 ರನ್ ಸೇರಿಸಿದರು. ಪಂಜಾಬ್ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಲಿಯಾಮ್ ಲಿವಿಂಗ್‌ಸ್ಟೋನ್(3-27)ಹಾಗೂ ಅರ್ಷದೀಪ್ ಸಿಂಗ್(3-37)ತಲಾ ಮೂರು ವಿಕೆಟ್‌ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News