ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೆ‌ನ್, ಪುಸ್ತಕ ಕೊಡುವ ಬದಲು ರೈಫಲ್ ಟ್ರೈನಿಂಗ್ ಮಾಡಲಾಗಿದೆ: ಯು.ಟಿ.ಖಾದರ್ ಆರೋಪ

Update: 2022-05-17 11:32 GMT

ಮಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೆ‌ನ್, ಪುಸ್ತಕ ಕೊಡುವ ಬದಲು ರೈಫಲ್ ಟ್ರೈನಿಂಗ್ ಮಾಡಲಾಗಿದೆ. ಶಾಸಕರೇ ಮುಂದೆ ನಿಂತು ಮಾಡಿರೋದು ಸರ್ಕಾರದ ತಾಲಿಬಾನ್ ಸಂಸ್ಕೃತಿಯನ್ನು ತೋರಿಸಿದಂತಾಗಿದೆ ಎಂದು ವಿಪಕ್ಷ ಉಪ ನಾಯಕ ಯು.ಟಿ. ಖಾದರ್ ಆರೋಪಿಸಿದ್ದಾರೆ.

ಸರ್ಕಾರ ಗೂಂಡಾಗಿರಿ ಮಾಡಲು ಹೊರಗುತ್ತಿಗೆ ಕೊಟ್ಟಂತಿದೆ. ಎನ್ ಸಿಸಿಯಂಥ ಸಂಸ್ಥೆಗಳು ಅಧಿಕೃತ, ಅವರು ದೇಶ ಸೇವೆಗಾಗಿ ತರಬೇತಿ ಕೊಡುತ್ತಾರೆ. ಅದರೆ ಕೂಡಗಿನಲ್ಲಿ ಮಾಡಿದವರು ಯಾರು ಅನ್ನೋದು ಗೊತ್ತಿದೆ. ಇವರ ಉದ್ದೇಶ ಏನು ? ಅನುಮತಿ ಯಾರು ಕೊಟ್ಟಿದ್ದು ಎಂಬುದರ ತನಿಖೆ ಆಗಲಿ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಹೈಸ್ಕೂಲ್ ಪ್ರಾರಂಭಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಬಿಡಿ ಅಂಗನವಾಡಿ ಕೂಡ ಹೊಸತಾಗಿ ಆರಂಭಿಸಿಲ್ಲ‌. ವಿದ್ಯಾಸಂಸ್ಥೆಗಳಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಕೊಟ್ಟಿರೋದು ಸರ್ಕಾರದ ನಿರ್ಲಕ್ಷ್ಯ. ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಈ ಬಗ್ಗೆ ಜನರಿಗೆ ಉತ್ತರಿಸಲಿ. ಈ ವಿಚಾರದಲ್ಲಿ ಮುಖ್ಯಮಂತ್ರಿ ಕೂಡ ಮೌನವಾಗಿರೋದು ಸರಿಯಲ್ಲ. ಮಕ್ಕಳ ಕೈಗೆ ಪುಸ್ತಕ, ಪೆನ್ ಕೊಡುವ ಬದಲು ಆಯುಧ ಕೊಡುತ್ತಾರ ? ಗನ್ ಹಿಡಿದುಕೊಂಡು ಸುತ್ತಾಡಲಿಕ್ಕೆ ಇದೇನು ಉತ್ತರ ಪ್ರದೇಶವಾ ? ಕಾಂಗ್ರೆಸ್ ಸೇವಾದಳ ಅಥವಾ ಯೂತ್ ಕಾಂಗ್ರೆಸ್ ಮಾಡಿದ್ರೆ ಏನಾಗುತ್ತಿತ್ತು ? ಎಂದವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳ ಸುರಿಮಳೆಗೈದರು.

ದೇಶದ ಭವಿಷ್ಯ ಮಕ್ಕಳು, ಮಕ್ಕಳಲ್ಲಿ ದ್ವೇಷದ ವಾತಾವರಣ ಬೇಡ. ಹೀಗಾಗಿ ದ್ವೇಷ ಹುಟ್ಟುವ ವಿಚಾರಗಳು ಮಕ್ಕಳಲ್ಲಿ ಬೇಡ ಎಂದು ಅವರು ಹೇಳಿದರು.

ಮುಸ್ಲಿಮರ ಓಟ್ ಬೇಡ, ಹಿಂದೂಗಳ ಓಟ್ ಸಾಕು ಎಂಬ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳ್ತಂಗಡಿ ಶಾಸಕರ ಅಪ್ರಬುದ್ಧ ಮಾತು, ಅದೊಂದು ಕೀಳು ರಾಜಕೀಯ. ಅದಕ್ಕೆ ನಾನು ಉತ್ತರ ಕೊಡಲ್ಲ, ಅದಕ್ಕೆ ಬೆಳ್ತಂಗಡಿ ಜ‌ನ ಉತ್ತರ ಕೊಡುತ್ತಾರೆ ಅಂದರು.

ಓಟ್ ಕೊಟ್ಟ ಜನರಿಗಾದ್ರೂ ಮೊದಲು ಇವರು ಕೆಲಸ ಮಾಡಲಿ‌. ಅಲ್ಲಿನ ಎಂಡೋಸಲ್ಫಾನ್ ಪೀಡಿತರಿಗೆ ಇವರು ಏನು ಮಾಡಿದ್ದಾರೆ ? ಮೊದಲು ಇವರು ಅದನ್ನ ಮಾಡಲಿ, ಅದು ಬಿಟ್ಟು ಇದೆಲ್ಲಾ ಅಲ್ಲ ಎಂದು ಯುಟಿ ಖಾದರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News