ಎಸೆಸೆಲ್ಸಿ ಪಠ್ಯದಿಂದ ನಾರಾಯಣಗುರುಗಳ ಪಾಠ ಹೊರಕ್ಕೆ ಆರೋಪ: ಬಿಲ್ಲವ ಸಮುದಾಯದಿಂದ ತೀವ್ರ ಆಕ್ಷೇಪ

Update: 2022-05-18 06:39 GMT
ಬ್ರಹ್ಮಶ್ರೀ ನಾರಾಯಣಗುರು

ಮಂಗಳೂರು, ಮೇ 18: ಎಸೆಸೆಲ್ಸಿ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣಗುರುಗಳ ಕುರಿತಾದ ಪಠ್ಯವನ್ನು ಕೈಬಿಡಲಾಗಿದೆ ಎಂಬ ಮಾಹಿತಿಯು ನಾರಾಯಣಗುರುಗಳ ಅನುಯಾಯಿಗಳ ತೀವ್ರ ಅಸಮಾಧಾನ, ಆಕ್ಷೇಪಕ್ಕೆ ಕಾರಣವಾಗಿದೆ.

ಈಗಾಗಲೇ 10ನೇ ತರಗತಿಯ ಪಠ್ಯದಲ್ಲಿ ಆರೆಸ್ಸೆಸ್ ಸಂಸ್ಥಾಪಕ  ಎ.ಬಿ.ಹೆಡಗೆವಾರ್ ಭಾಷಣ ಸೇರಿಸಿರುವುದು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಮಧ್ಯೆ ದಕ್ಷಿಣ ಭಾರತದ ಶ್ರೇಷ್ಠ ದಾರ್ಶನಿಕ, ಕ್ರಾಂತಿಕಾರ, ಮಾನವತಾವಾದಿ ನಾರಾಯಣಗುರುಗಳು ಹಾಗೂ ಪೆರಿಯಾರ್ ಪಠ್ಯವನ್ನು ಕೈಬಿಡಲಾಗಿದೆ ಎಂಬ ಮಾಹಿತಿಗಳು ಗುರುಗಳ ಅನುಯಾಯಿಗಳು ಹಾಗೂ ಬಿಲ್ಲವ ಸಮಾಜದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಎಸೆಸೆಲ್ಸಿಯ ಸಮಾಜ ವಿಜ್ಞಾನದ 2020ನೇ ಸಾಲಿನ ಪಠ್ಯಪುಸ್ತಕ ಮತ್ತು 2022ನೇ ಸಾಲಿನ ಪರಿಷ್ಕೃತ ಪಠ್ಯಪುಸ್ತಕದ ಪಿಡಿಎಫ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಸಮುದಾಯದ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಎಂಬ ಪಠ್ಯದಿಂದ 'ಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಯೋಗಂ' ಎಂಬ ಶ್ರೀ ನಾರಾಯಣಗುರುಗಳ ಧಾರ್ಮಿಕ ಸುಧಾರಣೆಯನ್ನು ಈ ವರ್ಷದಿಂದ ಪಠ್ಯ ಪರಿಷ್ಕರಣೆ ಸಮಿತಿಯ ಶಿಫಾರಸಿನಂತೆ ಕರ್ನಾಟಕ ಸರಕಾರ ಕೈಬಿಟ್ಟಿದೆ ಎನ್ನಲಾಗಿದ್ದು, ಇದು ನಾರಾಯಣಗುರುಗಳ ತತ್ವಾದರ್ಶಗಳ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬಿಲ್ಲವ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದ್ವೇಷ, ಅಸಹನೆ, ಸಾಮಾಜಿಕ ಅಸಮಾನತೆ ಮೊದಲಾದ ಸಮಸ್ಯೆಗಳನ್ನು ದೇಶ ಎದುರಿಸುತ್ತಿರುವಾಗ ಜಾತಿ ಭೇದ, ಮತ ದ್ವೇಷ ಇಲ್ಲದೆ ಸಮಾನತೆಯ ಮಾನವಧರ್ಮವನ್ನು ಜಗತ್ತಿಗೆ ಬೋಧಿಸಿ, ಕೇರಳದಲ್ಲಿ ಅದನ್ನು ಕಾರ್ಯಗತಗೊಳಿಸಿದ ಮಹಾನ್ ದಾರ್ಶನಿಕ ಮಾನವತಾವಾದಿ ಶ್ರೀ ನಾರಾಯಣಗುರುಗಳ ತತ್ವ ಅನುಷ್ಠಾ ಇಂದಿನ ತುರ್ತು ಅಗತ್ಯ ಎಂದು ಬಿಲ್ಲವ ಮುಖಂಡರು ಹೇಳಿದ್ದು, ಸರಕಾರ ಈ ಕುರಿತು ಚಿಂತನೆ ನಡೆಸಬೇಕಾಗಿದೆ ಎಂದು ಬಿಲ್ಲವ ಸಮುದಾಯದ ರಾಜೇಂದ್ರ ಚಿಲಿಂಬಿ ಅಭಿಪ್ರಾಯಿಸಿದ್ದಾರೆ.


ನಾರಾಯಣಗುರುಗಳು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಕೈಬಿಟ್ಟಿರುವುದು ಖಂಡನೀಯ. ಸಮಾಜ ಸುಧಾಕರ ಸಂತರೆನಿಸಿಕೊಂಡ ಇವರಿಬ್ಬರ ಸಂದೇಶಗಳನ್ನು ನಿರ್ಲಕ್ಷಿಸಿರುವುದು ಜಾತಿ ಧರ್ಮಗಳ ಕಲಹದ ಬೇಗೆಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ದುರುದ್ದೇಶಪೂರಿತ ನಡೆ ಹಾಗೂ ಗುರುಗಳ ತತ್ವ ಸಿದ್ಧಾಂತ ಅನುಸರಿಸುತ್ತಿರುವ ಅನುಯಾಯಿಗಳಿಗೆ ಮಾಡಿದ ಅವಮಾನ.

- ಪದ್ಮರಾಜ್ ಆರ್., ಕೋಶಾಧಿಕಾರಿ, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News