ಮೋದಿಗೆ ಪ್ರೇರಣೆಯಾದ ಬ್ರಹ್ಮಶ್ರೀ ನಾರಾಯಣ ಗುರು ಸರಕಾರಕ್ಕೆ ಬೇಡವೇ: ಹರೀಶ್ ಕುಮಾರ್ ಆಕ್ರೋಶ

Update: 2022-05-18 14:51 GMT

ಮಂಗಳೂರು, ಮೇ ೧೮: ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರೇರಣೆಯಾದ ಬ್ರಹ್ಮಶ್ರೀ ನಾರಾಯಣ ಗುರುಗಳು ರಾಜ್ಯ ಸರಕಾರಕ್ಕೆ ಬೇಡವಾಯಿತೇ? ಎಸೆಸೆಲ್ಸಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಕೈಬಿಟ್ಟಿದ್ದು ಖಂಡನೀಯ ಬಿಲ್ಲವ ಸಮುದಾಯದವ ರಾದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೊಂದು ಗಂಭೀರ ವಿಚಾರವಾಗಿದ್ದು, ಕೂಡಲೇ ಶಿಕ್ಷಣ ಸಚಿವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕು. ಒಂದು ವೇಳೆ ಮಹಾನ್ ನಾಯಕರ ಪಠ್ಯ ಕೈಬಿಟ್ಟಿದ್ದರೆ ಕೂಡಲೇ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಬಿಜೆಪಿ ಸರಕಾರ ಮುಂದಿನ ದಿನಗಳಲ್ಲಿ ತಕ್ಕ ಪ್ರತಿರೋಧವನ್ನು ಎದುರಿಸಬೇಕಾದೀತು ಎಂದು ಹರೀಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

೨೦೨೨ರ ಎ.೪ರಂದು ಶಿವಗಿರಿ ಯಾತ್ರೆಯ ೯೦ನೆ ವಾರ್ಷಿಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮನುಜಕುಲ ಒಂದೇ ಎನ್ನುವ ನಾರಾಯಣ ಗುರುಗಳ ಬೋಧನೆಯ ಸಂದೇಶಗಳನ್ನು ಜನರು ಅನುಸರಿಸಿದರೆ ಜಗತ್ತಿನ ಯಾವುದೇ ಶಕ್ತಿಯೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅವರದೇ ಆಡಳಿತ ನಡೆಸುವ ರಾಜ್ಯ ಬಿಜೆಪಿ ಸರಕಾರ ನಾರಾಯಣ ಗುರುಗಳ ಪಠ್ಯವನ್ನೇ ಕೈಬಿಟ್ಟಿದೆ. ಹಾಗಿರುವಾಗ ಮೋದಿ ಭಾಷಣ ಹೇಳಿಕೆ ಕೇವಲ ನಾಟಕೀಯವೇ?  ಸಮಾಜ ಸುಧಾರಕರಾದ ನಾರಾಯಣ ಗುರು ಹಾಗೂ ಪೆರಿಯಾರ್ ಅವರು ಸಂದೇಶಗಳಿರುವ ಪಠ್ಯ ಭಾಗವನ್ನು ಪಠ್ಯ ಪರಿಷ್ಕರಣ ಸಮಿತಿ ಕೈಬಿಟ್ಟಿರುವುದು ಖಂಡನೀಯ. ಇದು ಸ್ಥಾಪಿತ ಹಿತಾಶಕಿತಿಗಳ ಓಲೈಕೆ ಮಾಡುವ ಬಿಜೆಪಿ ಸರಕಾರದ ಮುಖವಾಡವನ್ನು ಅನಾವರಣಗೊಳಿಸಿದಂತಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News