ತೆಂಕುತಿಟ್ಟು ಯಕ್ಷಗಾನ ಭಾಗವತ ಕೊರಗಪ್ಪ ನಾಯ್ಕ ನಿಧನ

Update: 2022-05-18 16:12 GMT

ಉಡುಪಿ, ಮೇ೧೮: ಕಟೀಲು ಮೇಳದಲ್ಲಿ ದೀರ್ಘಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕಾಟುಕುಕ್ಕೆ ಕೊರಗಪ್ಪ ನಾಯ್ಕ ಇವರು ದೀರ್ಘಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು. 

ಹಿರಿಯ ಬಲಿಪ ನಾರಾಯಣ ಭಾಗವತರ ಸಾಮೀಪ್ಯದಲ್ಲಿ ಯಕ್ಷಗಾನದತ್ತ ಆಕರ್ಷಿತರಾದ ಕೊರಗಪ್ಪ ನಾಯ್ಕರು ಭಾಗವತಿಕೆಯಲ್ಲಿಯೂ ಬಲಿಪ ಮಾರ್ಗದ ಪಥಿಕರು. ಕಟೀಲು- ಒಂದೇ ಮೇಳವಾಗಿದ್ದಾಗ ಸಂಗೀತಗಾರರಾಗಿ ಸೇರಿದ ಕೊರಗಪ್ಪ ನಾಯ್ಕರು ದೀರ್ಘಕಾಲ ಇರಾ ಗೋಪಾಲಕೃಷ್ಣ ಕುಂಡೆಚ್ಚ ಭಾಗವತರಿಗೆ ಸಹಾಯಕ ಭಾಗವತರಾಗಿ ಸೇವೆಸಲ್ಲಿಸಿದ್ದರು. ಮುಖ್ಯ ಮದ್ದಲೆಗಾರರಾಗಿದ್ದ ನಿಡ್ಲೆ ನರಸಿಂಹ ಭಟ್ಟರು, ಅಡೂರು ಕೃಷ್ಣ ಮದ್ಲೆಗಾರರು, ಅಡೂರು ಸುಂದರ ರಾಯರಂಥವರ ಜೊತೆಗೆ ಒಡನಾಡಿದ್ದರು. 

೭೦-೯೦ರ ದಶಕಗಳಲ್ಲಿ ಕಟೀಲಿನ ರಂಗ ಘನತೆಯನ್ನು ಒಂದಡಿ ಏರಿಸಿದ ಪ್ರತಿಭಾಶಾಲಿಗಳಾದ, ಕದ್ರಿ ವಿಷ್ಣು, ಕುಂಬಳೆ ಕುಟ್ಯಪ್ಪು, ಪಡ್ರೆ ಚಂದು, ಕುಂಞ್ಞೆಕಣ್ಣ ಮಣಿಯಾಣಿ, ಪುತ್ತೂರು ಕೃಷ್ಣ ಭಟ್ಟ, ಸಂಪಾಜೆ ಶೀನಪ್ಪ ರೈ,  ಮುಂದಿಲ ಕೃಷ್ಣ ಭಟ್ಟ,   ಕೋಡಿ ಕುಷ್ಟ , ಅಜಾರು ಉಮೇಶ ಶೆಟ್ಟಿ, ಮುಂಡ್ಕೂರು ಕುಟ್ಟಿ ಶೆಟ್ಟಿ ಮೊದಲಾದವರನ್ನು ಕುಣಿಸಿದ ಅನುಭವ ಕೊರಗಪ್ಪ ನಾಯ್ಕರಿಗಿತ್ತು. ಸೇವಾವಧಿಯ ಕೊನೆಯ ವರ್ಷಗಳಲ್ಲಿ ಕುಬಣೂರು ಶ್ರೀಧರ ರಾಯರಿಗೆ ಸಹಾಯಕ ಭಾಗವತರಾಗಿದ್ದರು.

ಮದ್ದಲೆ ವಾದನವನ್ನೂ  ಅರಿತಿದ್ದ ಕೊರಗಪ್ಪ ನಾಯ್ಕರದ್ದು ರಂಗಸ್ಥಳವನ್ನು ತುಂಬುವ  ಕಂಠ. ನಾಟ, ಕಾಂಬೋಧಿ, ಭೈರ, ಕಲ್ಯಾಣಿ, ಶಂಕರಾಭರಣ ರಾಗಗಳಂತೂ ಲೌಕಿಕ ರಂಗದಲ್ಲಿ ಪೌರಾಣಿಕ ಪ್ರಪಂಚವನ್ನು ಕಟ್ಟಿಕೊಡುತ್ತಿದ್ದವು. ವೀರರಸದ ಪದಗಳಲ್ಲಿ ವೇಷಧಾರಿಗಳಲ್ಲಿ ಆವೇಶ ಹುಟ್ಟಿಸುತ್ತಿದ್ದರು.  ‘ದೇವಿ ಮಹಾತ್ಮೆ’, ‘ಕುಮಾರಜಯ’, ‘ಕಿರಾತಾರ್ಜುನ’, ‘ಇಂದ್ರಕೀಲಕ’, ‘ಬ್ರಹ್ಮಕಪಾಲ’ ಗಳಂಥ ಪ್ರಸಂಗಗಳ ಪ್ರದರ್ಶನದಲ್ಲಿ ಆ ಕಾಲದ ಪ್ರಸಿದ್ಧ ಹಿರಿಯ ಭಾಗವತರಿಗೆ ಸರಿಸಾಟಿ ಪ್ರದರ್ಶನ ನೀಡುತಿದ್ದರು.  

ಕೊರಗಪ್ಪ ನಾಯ್ಕರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ೨೦೧೮ರಲ್ಲಿ ಪಟ್ಲ ಫೌಂಡೇಶನ್ ಅವರಿಗೆ ಮನೆಯೊಂದನ್ನು ನಿರ್ಮಿಸಿಕೊಟ್ಟಿತ್ತು. ಉಡುಪಿಯ ಯಕ್ಷಗಾನ ಕಲಾರಂಗವು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಗೌರವಕ್ಕೂ ಕೊರಗಪ್ಪ ನಾಯ್ಕರು ಪಾತ್ರರಾಗಿದ್ದರು, ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News