ಮಣಿಪಾಲ ಕೆಎಂಸಿಯಲ್ಲಿ ‘ಆಯುಷ್ಮಾನ್’ ಗೆ 100 ಬೆಡ್ ಮೀಸಲಿರಿಸಲು ರಾಜ್ಯ ಆರೋಗ್ಯ ಇಲಾಖೆ ಆದೇಶ

Update: 2022-05-18 16:56 GMT

ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಫಾರಸ್ಸಿನಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಫಲಾನುಭವಿ ಗಳಿಗೆ ಕನಿಷ್ಠ 100 ಹಾಸಿಗೆಗಳನ್ನು ಮೀಸಲಿಡಲು ರಾಜ್ಯ ಆರೋಗ್ಯ ಇಲಾಖೆ ಆದೇಶ ನೀಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

ಕೆಎಂಸಿ ಆಸ್ಪತ್ರೆಯು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ 2018ರಿಂದ ನೋಂದಣಿಯಾಗಿದೆ. ಆದರೆ, ಆಸ್ಪತ್ರೆಯಲ್ಲಿ ಎಬಿಎಆರ್‌ಕೆ ಯೋಜನೆಯಡಿಯಲ್ಲಿ ದಾಖಲಾಗುವ ರೋಗಿಗಳಿಗೆ ಸೂಕ್ತವಾಗಿ ಹಾಸಿಗೆಗಳು ಲಭ್ಯವಾಗದೇ ಯೋಜನೆಯಿಂದ ವಿಮುಖರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನಿರಂತರವಾಗಿ ಈ ಸಮಸ್ಯೆಯ ಕುರಿತು ಸರಕಾರದ ಗಮನಸೆಳೆದಿದ್ದರು. ಇದು ಸರ್ಕಾರದ ಗಮನಕ್ಕೂ ಬಂದಿದ್ದು, ಎಬಿಎಆರ್‌ಕೆ ಯೋಜನೆಯಡಿ ಶಿಫಾರಸ್ಸಾದ ರೋಗಿಗಳಿಗೆ 100 ಹಾಸಿಗೆಗಳನ್ನು ಮೀಸಲಿಟ್ಟು, ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ.

ಸರಕಾರದ ಆದೇಶವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News