ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿದ ಕ್ವಿಂಟನ್ ಡಿಕಾಕ್, ಕೆ.ಎಲ್.ರಾಹುಲ್

Update: 2022-05-18 17:21 GMT
Photo: twitter

  ನವಿ ಮುಂಬೈ, ಮೇ 18: ಹಾಲಿ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಕ್ವಿಂಟನ್ ಡಿಕಾಕ್(ಔಟಾಗದೆ 140 ರನ್,70 ಎಸೆತ,10 ಬೌಂಡರಿ, 10 ಸಿಕ್ಸರ್ ) ಹಾಗೂ ಕೆ.ಎಲ್.ರಾಹುಲ್(ಔಟಾಗದೆ 68, 51 ಎಸೆತ, 3 ಬೌಂಡರಿ, 4 ಸಿಕ್ಸರ್) ಅರ್ಧಶತಕದ ಸಹಾಯದಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 210 ರನ್ ಕಲೆ ಹಾಕಿದೆ.
  
 ಬುಧವಾರ ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್‌ನ 66ನೇ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಡಿಕಾಕ್ ಹಾಗೂ ರಾಹುಲ್ ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ಗರಿಷ್ಠ ಜೊತೆಯಾಟ ನಡೆಸಿ ಹೊಸ ದಾಖಲೆ ನಿರ್ಮಿಸಿದರು. ಐಪಿಎಲ್‌ನ ಯಾವುದೇ ವಿಕೆಟ್‌ನಲ್ಲಿ ಮೂರನೇ ಗರಿಷ್ಠ ಜೊತೆಯಾಟದ ದಾಖಲೆ ಇದಾಗಿದೆ.

2016 ಹಾಗೂ 2015ರಲ್ಲಿ ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ-ಡಿವಿಲಿಯರ್ಸ್ ಜೋಡಿ ಕ್ರಮವಾಗಿ 229 ಹಾಗೂ 215 ರನ್ ಜೊತೆಯಾಟ ನಡೆಸಿತ್ತು. ಕೆಕೆಆರ್‌ನ ಯಾವೊಬ್ಬ ಬೌಲರ್ ಕೂಡ ಲಕ್ನೊ ಬ್ಯಾಟರ್‌ಗಳಾದ ಡಿಕಾಕ್ ಹಾಗೂ ರಾಹುಲ್‌ಗೆ ಸವಾಲಾಗಲಿಲ್ಲ. ಸ್ಪಿನ್ನರ್ ಸುನೀಲ್ ನರೇನ್ 4 ಓವರ್‌ಗಳಲ್ಲಿ 27 ರನ್ ಬಿಟ್ಟುಕೊಟ್ಟರು. ವೇಗದ ಬೌಲರ್‌ಗಳಾದ ಟಿಮ್ ಸೌಥಿ ಹಾಗೂ ಆ್ಯಂಡ್ರೆ ರಸೆಲ್ ಕ್ರಮವಾಗಿ 57 ಹಾಗೂ 47 ರನ್ ಬಿಟ್ಟುಕೊಟ್ಟರು.

ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಲ್ಲಿದೆ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ ಪರ ಗೇಲ್ ಔಟಾಗದೆ 175 ರನ್ ಗಳಿಸಿದ್ದರು. ಇದೀಗ ಡಿಕಾಕ್ ಅವರು ಮೆಕಲಮ್(2008ರಲ್ಲಿ ಕೆಕೆಆರ್ ಪರ ಆರ್‌ಸಿಬಿ ವಿರುದ್ಧ ಔಟಾಗದೆ 158)ಬಳಿಕ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ 3ನೇ ಬ್ಯಾಟರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News