34 ವರ್ಷ ಹಳೆಯ ಬೀದಿ ಜಗಳ ಪ್ರಕರಣ: ಕಾಂಗ್ರೆಸ್ ನಾಯಕ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ

Update: 2022-05-19 16:45 GMT

ಹೊಸದಿಲ್ಲಿ,ಮೇ 19: ಸರ್ವೋಚ್ಚ ನ್ಯಾಯಾಲಯವು 34 ವರ್ಷಗಳಷ್ಟು ಹಳೆಯ ಬೀದಿ ಜಗಳ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (58) ಅವರಿಗೆ ಗುರುವಾರ ಒಂದು ವರ್ಷ ಕಠಿಣ ಜೈಲುಶಿಕ್ಷೆಯನ್ನು ವಿಧಿಸಿದೆ.ಶಿಕ್ಷೆಯನ್ನು ಅನುಭವಿಸಲು ಸಿಧು ನ್ಯಾಯಾಲಯದ ಎದುರು ಶರಣಾಗಬೇಕಿದೆ.ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಇದು ಸಿಧುಗೆ ಇನ್ನೊಂದು ಹಿನ್ನಡೆಯಾಗಿದೆ. ಬೆಳಿಗ್ಗೆ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದ ಸಿಧು‘ನ್ಯಾಯಾಲಯದ ಸಾರ್ವಭೌಮತ್ವಕ್ಕೆ ತಲೆ ಬಾಗುತ್ತೇನೆ ’ಎಂದು ಟ್ವೀಟಿಸಿದ್ದಾರೆ.ಸಿಧು ತನ್ನ ವಿರುದ್ಧದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ.


1988ರಲ್ಲಿ ಸಿಧು ಮತ್ತು ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಜೊತೆಗೆ ನಡೆದ ಜಗಳದ ಬಳಿಕ ಮೃತಪಟ್ಟಿದ್ದ 65ರ ಹರೆಯದ ಪಟಿಯಾಳಾ ನಿವಾಸಿ ಗುರ್ನಾಮ್ ಸಿಂಗ್ ಅವರ ಕುಟುಂಬವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸರ್ವೋಚ್ಚ ನ್ಯಾಯಾಲಯವು ಸಿಧು ತಪ್ಪಿತಸ್ಥರು ಎಂದು ಎತ್ತಿ ಹಿಡಿದಿದೆ.
ಸಿಧು ವಿರುದ್ಧ ಗುರುತರ ಆರೋಪವನ್ನು ಹೊರಿಸುವಂತೆ ಮತ್ತು ಅವರನ್ನು ದೋಷಮುಕ್ತಗೊಳಿಸಿದ್ದ 2018ರ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪುನರ್ಪರಿಶೀಲಿಸುವಂತೆ ಸಿಂಗ್ ಕುಟುಂಬ ಕೋರಿತ್ತು.1988,ಡಿ.27ರಂದು ಪಾರ್ಕಿಂಗ್ ವಿಷಯದಲ್ಲಿ ಸಿಧು ಸಿಂಗ್ ಜೊತೆ ಜಗಳವಾಡಿದ್ದರು. ಈ ವೇಳೆ ಸಿಧು ಮತ್ತು ಸಂಧು ಸಿಂಗ್ ಅವರನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದರು. ಸಿಂಗ್ ಬಳಿಕ ನಿಧನರಾಗಿದ್ದರು.1999ರಲ್ಲಿ ಪಟಿಯಾಳಾದ ಸೆಷನ್ಸ್ ನ್ಯಾಯಾಲಯವು ಸಾಕ್ಷಾಧಾರದ ಕೊರತೆಯನ್ನು ಉಲ್ಲೇಖಿಸಿ ಮತ್ತು ಸಂಶಯದ ಲಾಭ ನೀಡಿ ಸಿಧು ಮತ್ತು ಸಂಧು ಅವರನ್ನು ಬಿಡುಗಡೆಗೊಳಿಸಿತ್ತು.

ಸಿಂಗ್ ಕುಟುಂಬ ಇದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು, 2006ರಲ್ಲಿ ಸಿಧು ಅವರನ್ನು ದಂಡನೀಯ ನರಹತ್ಯೆಗಾಗಿ ತಪ್ಪಿತಸ್ಥ ಎಂದು ಘೋಷಿಸಿದ್ದ ಉಚ್ಚ ನ್ಯಾಯಾಲಯವು ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು. 2018ರಲ್ಲಿ ಸಿಧು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಸಿಂಗ್ ಒಂದೇ ಹೊಡೆತಕ್ಕೆ ಮೃತಪಟ್ಟಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರವಿಲ್ಲ ಎಂದು ಹೇಳಿ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿತ್ತು. ಆದರೆ ಸಿಧು ಸಿಂಗ್ಗೆ ನೋವನ್ನುಂಟು ಮಾಡಿದ್ದರು ಎಂದು ಎತ್ತಿಹಿಡಿದಿದ್ದ ಅದು ಜೈಲುಶಿಕ್ಷೆಯ ಬದಲು 1,000 ರೂ.ಗಳ ದಂಡವನ್ನು ವಿಧಿಸಿತ್ತು. ಸರ್ವೋಚ್ಚ ನ್ಯಾಯಾಲಯವು ಸಂಧುವನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News