ನಿಯಮಗಳನ್ನು ಪಾಲಿಸಿ ಅಥವಾ ಭಾರತವನ್ನು ತೊರೆಯಿರಿ: ವಿಪಿಎನ್ ಸೇವಾ ಪೂರೈಕೆದಾರರಿಗೆ ಸರಕಾರದ ತಾಕೀತು

Update: 2022-05-19 16:39 GMT

ಹೊಸದಿಲ್ಲಿ,ಮೇ 19: ನೂತನ ಮಾರ್ಗಸೂಚಿಗಳನ್ನು ಪಾಲಿಸಲು ಸಿದ್ಧರಿಲ್ಲದ ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಅಥವಾ ವಿಪಿಎನ್ ಸೇವಾ ಪೂರೈಕೆದಾರರಿಗೆ ಭಾರತದಿಂದ ನಿರ್ಗಮಿಸುವುದು ಏಕೈಕ ಆಯ್ಕೆಯಾಗಿದೆ ಎಂದು ಸಹಾಯಕ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

ಸೈಬರ್ ಉಲ್ಲಂಘನೆ ಘಟನೆಗಳ ವರದಿಗಾರಿಕೆ ಕುರಿತು ಇತ್ತೀಚಿನ ನಿರ್ದೇಶದ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆ (ಎಫ್ಎಕ್ಯೂ)ಗಳು ಮತ್ತು ಅವುಗಳಿಗೆ ಉತ್ತರಗಳನ್ನು ಬುಧವಾರ ಬಿಡುಗಡೆಗೊಳಿಸಿದ ಚಂದ್ರಶೇಖರ್,ಒಳ್ಳೆಯ ಉದ್ದೇಶವನ್ನು ಹೊಂದಿರುವ ಪ್ರತಿಯೊಂದು ಕಂಪನಿ ಅಥವಾ ಸಂಸ್ಥೆಯು ಸುರಕ್ಷಿತ ಮತ್ತು ವಿಶ್ವಾಸಾರ್ಹ ಅಂತರ್ಜಾಲವು ತನಗೆ ನೆರವಾಗಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತದೆ. ಭಾರತದ ನಿಯಮಗಳು ಮತ್ತು ಕಾನೂನುಗಳನ್ನು ಅನುಸರಿಸುವುದಿಲ್ಲ ಎಂದು ಹೇಳಲು ಯಾರಿಗೂ ಅವಕಾಶವಿಲ್ಲ. ಬಳಕೆದಾರರ ಡಾಟಾ ನಿಮ್ಮ ಬಳಿಯಿಲ್ಲದಿದ್ದರೆ ಅವುಗಳ ನಿರ್ವಹಣೆಯನ್ನು ಆರಂಭಿಸಿ. ನೀವು ವಿಪಿಎನ್ ಸೇವಾ ಪೂರೈಕೆದಾರರಾಗಿದ್ದು,ನಿಮ್ಮ ವಿಪಿಎನ್ ಬಳಕೆದಾರರ ಕುರಿತು ಮಾಹಿತಿಗಳನ್ನು ಬಚ್ಚಿಡಲು ಬಯಸಿದ್ದರೆ ಮತ್ತು ಈ ನಿಯಮಗಳನ್ನು ಪಾಲಿಸಲು ಬಯಸದಿದ್ದರೆ ನಿಮಗೆ ಭಾರತವನ್ನು ತೊರೆಯುವುದನ್ನು ಬಿಟ್ಟರೆ ಬೇರೆ ಆಯ್ಕೆಯಿಲ್ಲ ಎಂದು ಹೇಳಿದರು.

ಕ್ಲೌಡ್ ಸೇವಾ ಪೂರೈಕೆದಾರರು,ವಿಪಿಎನ್ ಕಂಪನಿಗಳು,ಡಾಟಾ ಸೆಂಟರ್ ಕಂಪನಿಗಳು ಮತ್ತು ವರ್ಚುವಲ್ ಪ್ರೈವೇಟ್ ಸರ್ವರ್ ಪೂರೈಕೆದಾರರು ತಮ್ಮ ಬಳಕೆದಾರರ ಡಾಟಾವನ್ನು ಕನಿಷ್ಠ ಐದು ವರ್ಷಗಳ ಕಾಲ ಕಾಯ್ದುಕೊಳ್ಳುವುದನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕಡ್ಡಾಯಗೊಳಿಸಿದ್ದು,ಈ ಬಗ್ಗೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸಿಇಆರ್ಟಿ-ಇನ್) ಎ.28ರಂದು ನಿರ್ದೇಶವನ್ನು ಹೊರಡಿಸಿತ್ತು.
ನೂತನ ನಿಯಮವು ಸೈಬರ್ ಭದ್ರತಾ ಲೋಪದೋಷಗಳಿಗೆ ಕಾರಣವಾಗಬಹುದು ಎಂಬ ಕೆಲವು ವಿಪಿಎನ್ ಕಂಪನಿಗಳ ವಾದವನ್ನು ಸಚಿವರು ತಿರಸ್ಕರಿಸಿದ್ದಾರೆ.

ತಮ್ಮ ಸಿಸ್ಟಮ್ನಲ್ಲಿ ಸೈಬರ್ ಉಲ್ಲಂಘನೆಯ ಬಗ್ಗೆ ಗೊತ್ತಾದ ಆರು ಗಂಟೆಗಳಲ್ಲಿ ಅದನ್ನು ಕಂಪನಿಗಳು ವರದಿ ಮಾಡುವುದನ್ನು ಕಡ್ಡಾಯಗೊಳಿಸಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆಯನ್ನು ಸರಕಾರವು ಮಾಡುವುದಿಲ್ಲ ಎಂದು ಚಂದ್ರಶೇಖರ ಸ್ಪಷ್ಟಪಡಿಸಿದರು.
ಗೂಗಲ್,ಫೇಸ್ಬುಕ್,ಐಬಿಎಂ ಮತ್ತು ಸಿಸ್ಕೋದಂತಹ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿರುವ ಅಮೆರಿಕ ಮೂಲದ ತಂತ್ರಜ್ಞಾನ ಉದ್ಯಮ ಸಂಘಟನೆ ಐಟಿಐ ಸೈಬರ್ ಭದ್ರತಾ ಉಲ್ಲಂಘನೆ ಘಟನೆಗಳ ವರದಿಗಾರಿಕೆ ಕುರಿತು ಭಾರತ ಸರಕಾರದ ನಿರ್ದೇಶವನ್ನು ಪರಿಷ್ಕರಿಸುವಂತೆ ಕೋರಿದೆ.ನೂತನ ಆದೇಶದಲ್ಲಿನ ನಿಬಂಧನೆಗಳು ಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು ಮತ್ತು ದೇಶದಲ್ಲಿ ಸೈಬರ್ ಭದ್ರತೆಯನ್ನು ದುರ್ಬಲಗೊಳಿಸಬಹುದು ಎಂದು ಐಟಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News