ಮಲ್ಪೆ ಬಂದರಿನಲ್ಲಿ ಮೀನು ಹೊತ್ತು ಓದಿದ ಪುನೀತ್ ಗೆ 625 ಅಂಕ

Update: 2022-05-19 12:27 GMT

ಉಡುಪಿ : ಮಲ್ಪೆ ಬಂದರಿನಲ್ಲಿ ಮೀನು ಬುಟ್ಟಿಗಳನ್ನು ಹೊತ್ತು ಕೂಲಿ ಮಾಡಿ ಬದುಕು ನಡೆಸುತ್ತಿದ್ದ ಕೊಪ್ಪಳ ಮೂಲದ ವಲಸೆ ಕಾರ್ಮಿಕರ ಮಗ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಪುನೀತ್ ನಾಯ್ಕ್, ಎಸೆಸೆಲ್ಸಿ ಯಲ್ಲಿ ಟಾಪರ್ ಆಗಿ ಮೂಡಿಬಂದಿದ್ದಾರೆ.

625ಕ್ಕೆ 625 ಅಂಕ ಪಡೆದಿರುವ ಇವರು, ಜಿಲ್ಲಾಧಿಕಾರಿ ಆಗುವ ಕನಸು ಹೊಂದಿದ್ದಾರೆ.

ಕೊಪ್ಪಳ ಜಿಲ್ಲೆಯ ಕಲ್ಲಪ್ಪ ಹಾಗೂ ಲಲಿತಾ ಅವರು 10 ವರ್ಷಗಳ ಹಿಂದೆ ಜೀವನೋಪಾಯಕ್ಕಾಗಿ ಉಡುಪಿಗೆ ಬಂದಿದ್ದು, ಬಳಿಕ ಕಲ್ಲಪ್ಪ, ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ತ್ಯಜಿಸಿ ಹೋಗಿದ್ದರು. ಬಳಿಕ ಮಕ್ಕಳ ಸಾಕುವ ಜವಾಬ್ದಾರಿ ಹೊತ್ತು ಕೊಂಡ ಲಲಿತಾ, ಬೆಳಗಿನ ಜಾವ ಮಲ್ಪೆ ಬಂದರಿಗೆ ತೆರಳಿ ಮೀನು ಬುಟ್ಟಿ ಹೊತ್ತು ಕೂಲಿ ಮಾಡಿದರು. ಈ ರೀತಿ ಶ್ರಮ ವಹಿಸಿ ತನ್ನ ಮಕ್ಕಳಿಗೆ ಶಿಕ್ಷಣ ನೀಡಿದರು.

ತಾಯಿಗೆ ಜೊತೆಯಾದ ಮಕ್ಕಳು

ಕಲ್ಮಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ ಇವರದ್ದು ಕಷ್ಟದ ಬದುಕು. ಲಲಿತಾ ತನ್ನ ಹೆಣ್ಣು ಮಕ್ಕಳಾದ ಹೇಮಾ ಮತ್ತು ಪ್ರೇಮಾ ಅವರನ್ನು ಮದುವೆ ಮಾಡಿಸಿಕೊಟ್ಟರೆ, ಗಂಡು ಮಕ್ಕಳಾದ ಕಿರಣ್ ನಾಯ್ಕ್ ಹಾಗೂ ಪುನೀತ್ ನಾಯ್ಕ್‌ಗೆ ಉತ್ತಮ ಶಿಕ್ಷಣ ನೀಡಿದರು.

ಕೊರೋನ ಸಂದರ್ಭದಲ್ಲಿ ಬದುಕು ತತ್ತರಿಸಿದಾಗ ಕಿರಣ್ ಮತ್ತು ಪುನೀತ್ ತನ್ನ ತಾಯಿ ಕೆಲಸದಲ್ಲಿ ಜೊತೆಯಾದರು. ಬೆಳಗಿನ ಜಾವ ನಾಲ್ಕು ಗಂಟೆಗೆ ಮಲ್ಪೆ ಬಂದರಿಗೆ ಹೋಗಿ ಮೀನು ಹೊತ್ತು ಬದುಕು ನಡೆಸಲು ಹೆಗಲುಕೊಟ್ಟರು. ಇದರ ಮಧ್ಯೆಯೇ ಪುನೀತ್ ನಾಯ್ಕ್ ಶ್ರಮ ವಹಿಸಿ ಓದಿ, ರಾಜ್ಯಕ್ಕೆ ಎಸೆಸೆಲ್ಸಿ ಟಾಪರ್ ಆಗಿ ಮಹತ್ತರ ಸಾಧನೆ ಮಾಡಿದರು. ಪುನೀತ್ ಸಹೋದರ ಕಿರಣ್ ಕೂಡ ಈ ಹಿಂದೆ ಇದೇ ಶಾಲೆಯಲ್ಲಿ ಕಲಿತು ಉತ್ತಮ ಅಂಕ ಪಡೆದಿದ್ದಾರೆ.

ಈ ಪ್ರೌಢಶಾಲೆಗೆ ನಾಲ್ಕು ಶಿಕ್ಷಕರ ಕೊರತೆ ಇತ್ತು. ಪರೀಕ್ಷೆಗೆ ಎರಡು ತಿಂಗಳು ಇರುವಾಗ ಎರಡು ಶಿಕ್ಷಕರನ್ನು ನೇಮಿಸಲಾಗಿತ್ತು. ಆದರೂ ಪುನೀತ್ ಈ ಎಲ್ಲ ಕೊರತೆಗಳ ಮಧ್ಯೆಯೂ ಯಾವುದೇ ಟ್ಯೂಶನ್ ಪಡೆಯದೆ ಮಹತ್ತರ ಸಾಧನೆ ಮಾಡಿದ್ದಾರೆ.

75 ವರ್ಷಗಳನ್ನು ಪೂರೈಸಿರುವ ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯ ಇತಿಹಾಸದಲ್ಲೇ ಈ ರೀತಿ 625ರಲ್ಲಿ 625 ಅಂಕ ಪಡೆದಿರುವುದು ಇದೇ ಪ್ರಥಮ. ಇದರಿಂದ ಶಾಲೆಯಲ್ಲಿ ಸಂಭ್ರಮದ ವಾತಾವರಣ ಕಂಡುಬಂತು. ಸಾಧನೆ ಮಾಡಿದ ಪುನೀತ್‌ಗೆ ಶಿಕ್ಷಕರು ಅಭಿನಂದನೆ ಸಲ್ಲಿಸಿದರು. ಸಹಪಾಠಿಗಳು ಸಾಧಕನನ್ನು ಮೇಲಕ್ಕೆ ಎತ್ತಿ ಸಂಭ್ರಮಿಸಿದರು. ಶಿಕ್ಷಕರು, ಪುನೀತ್‌ಗೆ ಸಿಹಿತಿಂಡಿ ತಿನಿಸಿ ಬಳಿಕ ಎಲ್ಲರಿಗೂ ಹಂಚಿದರು.

‘ದೂರದ ಕೊಪ್ಪಳದಿಂದ ಬಂದು ಕಷ್ಟದ ಬದುಕು ನಡೆಸಿದ ಪುನೀತ್, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಬಂದರಿನಲ್ಲಿ ಕೆಲಸ ಮಾಡುತ್ತಿದ್ದನು. ನಂತರ ಶಾಲೆಗೆ ಬಂದು ಶ್ರದ್ಧೆಯಿಂದ ಓದುತ್ತಿದ್ದನು. ಒಂದು ದಿನವೂ ಗೈರು ಹಾಜರಾಗದೆ ಪ್ರತಿದಿನ ಶಾಲೆಗೆ ಬರುತ್ತಿದ್ದನು. ಯಾವುದೇ ಸಂಶಯಗಳಿದ್ದರೆ ಶಿಕ್ಷಕರ ಬಳಿ ಕೇಳಿ ಪರಿಹರಿಸಿ ಕೊಳ್ಳುತ್ತಿದ್ದನು. ಈ ರೀತಿ ಸಾಧನೆ ಮಾಡಿದ ಪುನೀತ್‌ನನ್ನು ನಮ್ಮ ವಿದ್ಯಾರ್ಥಿ ಹೇಳಲು ತುಂಬಾ ಹೆಮ್ಮೆ ಎನಿಸುತ್ತದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಪ್ರಭು ತಿಳಿಸಿದರು.

‘ಡಿಸಿಯಾಗಿ ಮಾದರಿ ಜಿಲ್ಲೆಯನ್ನಾಗಿಸುವ ಗುರಿ’

‘ಮುಂದೆ ಪಿಯುಸಿಯಲ್ಲಿ ವಿಜ್ಞಾನ ತೆಗೆದುಕೊಂಡು ಉತ್ತಮವಾಗಿ ಓದಿ, ಯುಪಿಎಸ್‌ಸಿ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಿ ಮಾದರಿ ಜಿಲ್ಲೆಯನ್ನಾಗಿ ಮಾಡುವುದು ನನ್ನ ಗುರಿಯಾಗಿದೆ ಎಂದು ಟಾಪರ್ ಪುನೀತ್ ನಾಯ್ಕ್ ತಿಳಿಸಿದರು.

625ಕ್ಕೆ 625 ಅಂಕ ಗಳಿಸುವ ನಿರೀಕ್ಷೆ ಮಾಡಿದ್ದೆ. ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೂ ತಾಯಿ, ನಮ್ಮ ಶಿಕ್ಷಣಕ್ಕೆ ತುಂಬಾ ಪ್ರೋತ್ಸಾಹ ಮಾಡಿದ್ದಾರೆ. ಮನೆ ಹಾಗೂ ಶಾಲೆಯಲ್ಲಿನ ಒಳ್ಳೆಯ ವಾತಾವರಣದಿಂದ ಓದಿ ಈ ಸಾಧನೆ ಮಾಡಲು ಸಾಧ್ಯವಾಯಿತು. ಅಣ್ಣ ಕೂಡ ನನಗೆ ಹೇಳಿಕೊಡುತ್ತಿದ್ದನು ಎಂದರು.

ರಜೆಯಲ್ಲಿ ಬೆಳಗಿನ ಜಾವ 4ಗಂಟೆಯಿಂದ ಬೆಳಗ್ಗೆ 9ಗಂಟೆಯವರೆಗೆ ಮಲ್ಪೆ ಬಂದರಿನಲ್ಲಿ ಮೀನು ಹೊರುವ ಕೆಲಸ ಮಾಡುತ್ತಿದ್ದೆ. ಒಮ್ಮೊಮ್ಮೆ ಶಾಲೆ ಇರುವಾಗಲೂ ಕೆಲಸ ಮಾಡಿ ಬರುತ್ತಿದ್ದೆ. ಕೇವಲ ಖಾಸಗಿ ಶಾಲೆಯವರು ಮಾತ್ರವಲ್ಲ, ವಿಶ್ವಾಸ, ಛಲ ಇದ್ದರೆ ಸರಕಾರಿ ಶಾಲೆಯ ಮಕ್ಕಳು ಕೂಡ ಸಾಧನೆ ಮಾಡಬಹುದು. ನಾನು ಯಾವುದೇ ಟ್ಯೂಶನ್‌ಗೂ ಹೋಗಿಲ್ಲ ಎಂದು ಅವರು ಹೇಳಿದರು.

"ತುಂಬಾ ಕಷ್ಟದಲ್ಲಿ ಮಕ್ಕಳನ್ನು ಓದಿಸುತ್ತಿದ್ದೇನೆ. ಗಂಡ ಬಿಟ್ಟು ಹೋದ ಬಳಿಕ ನಾನೇ ದುಡಿದು ಮಕ್ಕಳನ್ನು ಓದಿಸಿದ್ದೇನೆ. ಮಕ್ಕಳು ವಿದ್ಯೆ ಕಲಿಯಬೇಕು ಎಂಬುದು ನನ್ನ ಆಸೆ. ನನ್ನ ಈ ಶ್ರಮಕ್ಕೆ ಮಗ ಈ ರೀತಿ ಸಾಧನೆ ಮಾಡಿರುವುದಕ್ಕಿಂತ ದೊಡ್ಡ ಖುಷಿ ಬೇರೆ ಏನಿದೆ. ರಜೆಯಲ್ಲಿ ನನ್ನ ಜೊತೆ ಇಬ್ಬರು ಮಕ್ಕಳು ಕೂಡ ಕೆಲಸಕ್ಕೆ ಬರುತ್ತಿದ್ದರು. ಎಷ್ಟು ಕಷ್ಟ ಬಂದರೂ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದಿಲ್ಲ. ಮುಂದೆಯೂ ಅವರನ್ನು ಓದಿಸುತ್ತೇನೆ.
-ಲಲಿತಾ, ಪುನೀತ್ ನಾಯ್ಕ್‌ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News