ನನ್ನನ್ನು ವಜಾ ಮಾಡಬಹುದು,ಆದರೆ ಮೌನವಾಗಿಸಲು ಸಾಧ್ಯವಿಲ್ಲ

Update: 2022-05-19 16:56 GMT
Sunil Jakhar

ಹೊಸದಿಲ್ಲಿ,ಮೇ 18: ಕೆಲವು ದಿನಗಳ ಹಿಂದೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಸುನೀಲ್ ಜಾಖಡ್ ಅವರು ಗುರುವಾರ ಇಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಉಪಸ್ಥಿತಿಯಲ್ಲಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾಂಗ್ರೆಸ್ ಸಂಘಟನೆಯು ಈಗ ಗ್ಯಾಂಗ್ ಆಗಿ ಬದಲಾಗಿದೆ ಎಂದು ಜಾಖಡ್ ಈ ಸಂದರ್ಭದಲ್ಲಿ ಟೀಕಿಸಿದರು. ಮಾಜಿ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಯವರನ್ನು ಟೀಕಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕತ್ವವು ಜಾಖಡ್ಗೆ ಈ ಹಿಂದೆ ಶೋಕಾಸ್ ನೋಟಿಸ್ ಹೊರಡಿಸಿತ್ತು.

ಜಾಖಡ್ರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಬಹುದು ಮತ್ತು ಪಂಜಾಬಿನಲ್ಲಿ ಕೆಲವು ಹೊಣೆಗಾರಿಕೆಗಳನ್ನು ವಹಿಸಬಹುದು,ಅಲ್ಲದೆ ಇನ್ನಷ್ಟು ಅತೃಪ್ತ ಕಾಂಗ್ರೆಸ್ ನಾಯಕರನ್ನು ಬಿಜೆಪಿ ತೆಕ್ಕೆಗೆ ತರುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಬಹುದು ಎಂದು ಅವರಿಗೆ ನಿಕಟವಾಗಿರುವ ಮೂಲಗಳು ತಿಳಿಸಿದವು.
ಬಿಜೆಪಿ ಸೇರ್ಪಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾಖಡ್ ತನ್ನ ‘ಕುಟುಂಬ’ವಾದ ಕಾಂಗ್ರೆಸ್ ಜೊತೆ ಸಂಬಂಧವನ್ನು ಕಡಿದುಕೊಳ್ಳುವ ಕುರಿತು ವಿಷಾದ ವ್ಯಕ್ತಪಡಿಸಿದರು. ಪಕ್ಷವು ಶೇಕಡಾವಾರು ಲೆಕ್ಕದಲ್ಲಿ ಪಂಜಾಬನ್ನು ನಡೆಸಿಕೊಳ್ಳುವುದು ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸಲು ಸಾಧ್ಯವಿಲ್ಲ ಎಂದು ತಾನು ಬೆಟ್ಟು ಮಾಡಿದ್ದಕ್ಕಾಗಿ ತನ್ನನ್ನು ಕಾಂಗ್ರೆಸ್‌ನಲ್ಲಿ ಕಡೆಗಣಿಸಲಾಗಿತ್ತು ಎಂದರು. ‘ನೀವು ಸುನಿಲ್ ಜಾಖಡ್ರನ್ನು ಪಕ್ಷದ ಹುದ್ದೆಯಿಂದ ವಜಾ ಮಾಡಬಹುದು,ಆದರೆ ಅವರನ್ನು ವೌನವಾಗಿಸಲು ಸಾಧ್ಯವಿಲ್ಲ ’ಎಂದರು.

ಜಾಖಡ್ ಪಂಜಾಬಿನಲ್ಲಿ ಪ್ರತಿಷ್ಠಿತ ಸಿಕ್ಖೇತರ ಮುಖವಾಗಿದ್ದು,ಎಲ್ಲ ಪಕ್ಷಗಳಿಂದಲೂ ಗೌರವಿಸಲ್ಪಡುತ್ತಿದ್ದಾರೆ. ಹಲವಾರು ಅತೃಪ್ತ ಕಾಂಗ್ರೆಸ್ ನಾಯಕರ ಮೇಲೆ ಹಿಡಿತವನ್ನು ಹೊಂದಿರುವ ಅವರು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೊಂದಿಗೆ ಮೈತ್ರಿಯನ್ನು ಸಾಧಿಸಿದ ಬಳಿಕ ಬಿಜೆಪಿಯು ಗಾಳ ಹಾಕಿದ ಎರಡನೇ ಪ್ರಭಾವಿ ನಾಯಕರಾಗಿದ್ದಾರೆ. ಜಾಖಡ್ ನೆರೆಯ ಹಿಮಾಚಲ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗುವ ನಿರೀಕ್ಷೆಯಿದೆ.
ಮೂರು ಬಾರಿ ಶಾಸಕರಾಗಿರುವ ಜಾಖಡ್,2012ರಿಂದ 2017ರವರೆಗೆ ಪಂಜಾಬ್ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News