ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ದ.ಕ. ಡಿಸಿ ಸೂಚನೆ

Update: 2022-05-19 17:17 GMT

ಮಂಗಳೂರು : ದ.ಕ.ಜಿಲ್ಲೆಯ 22 ಕೇಂದ್ರಗಳಲ್ಲಿ ಮೇ 21 ಮತ್ತು 22ರಂದು ನಡೆಯಲಿರುವ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ನಿಯೋಜಿತ ಸಿಬ್ಬಂದಿ ವರ್ಗವು ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.

ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

22 ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಅನುಭವಿಗಳಾಗಿದ್ದಾರೆ. ಈ ರೀತಿಯ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಿರುತ್ತಾರೆ. ಆದರೆ ಇದೀಗ ನಡೆಯುವ ಪರೀಕ್ಷೆಯ ಸೂಕ್ಷ್ಮತೆಯ ಅರಿವಿರುವುದರಿಂದ ಪರೀಕ್ಷಾ ಕೇಂದ್ರಗಳ ಎಲ್ಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗವು ಅತ್ಯಂತ ಜಾಗರೂಕತೆಯಿಂದ ಸರಕಾರದ ಮಾರ್ಗಸೂಚಿಯ ಅನ್ವಯ ಕರ್ತವ್ಯ ನಿರ್ವಹಿಸಬೇಕು.  ಪರೀಕ್ಷಾ ಕೇಂದ್ರಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

೫೭೫ ಹುದ್ದೆಗಳ ಭರ್ತಿಗೆ ನಡೆಯುತ್ತಿರುವ ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು. ಈಗಾಗಲೇ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಮಾಹಿತಿ ನೀಡಲಾಗಿದೆ, ೨೨ ಕೇಂದ್ರಗಳ ಪೈಕಿ ಎರಡನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಖಾಸಗಿ ಕೇಂದ್ರವಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿಯನ್ನು ಅಳವಡಿಸಬೇಕು. ಅದರ ಫೂಟೇಟ್ ಪರಿಶೀಲಿಸಬೇಕು ಹಾಗೂ ಅದರ ದತ್ತಾಂಶವನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಡಿಸಿ ತಿಳಿಸಿದರು.

ಪರೀಕ್ಷಾ ವೇಳೆಯಲ್ಲಿ ಯಾವುದೇ ಕಾರಣಕ್ಕೂ ಯಾವ ಸಮಸ್ಯೆಗಳೂ ಉದ್ಬವಿಸಬಾರದು. ಯಾವುದಾರೂ ಲೋಪದೋದಗಳಿದ್ದಲ್ಲಿ ಅವುಗಳನ್ನು ಬಗೆಹರಿಸಿಕೊಳ್ಳಬೇಕು. ತಾನು ಸೇರಿದಂತೆ ಯಾರೊಬ್ಬರೂ ಕೂಡ ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯುವಂತಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಕೊಠಡಿಯಲ್ಲಿ ಬೆಳಕು, ಫ್ಯಾನ್, ಶೌಚಾಲಯ, ಸಿಸಿ ಟಿವಿಯ ಕಾರ್ಯನಿರ್ವಹಣೆ ಸಹಿತ ಅಗತ್ಯ ಸೌಕರ್ಯಗಳ ಬಗ್ಗೆ ಪರಿಶೀಲಿಸುವಂತೆ ಡಿಸಿ ಸೂಚಿಸಿದರು.

ಡಿಸಿಪಿ ಹರಿರಾಂ ಶಂಕರ್ ಮಾತನಾಡಿ ಪರೀಕ್ಷಾ ಕೇಂದ್ರಗಳ ಸಿಬ್ಬಂದಿ ವರ್ಗಕ್ಕೆ ನಿರ್ದೇಶನವಿರುವಂತೆ ಪ್ರವೇಶ ದ್ವಾರದಲ್ಲಿ ತಪಾಸಣೆ ನಡೆಸಬೇಕು. ಪೊಲೀಸ್ ಇಲಾಖೆಯಿಂದ ೨೨ ಕೇಂದ್ರಗಳಿಗೆ ಮಹಿಳಾ ಹಾಗೂ ಪುರುಷ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗುವುದು.  ಪ್ರತಿ ಕೇಂದ್ರಗಳಿಗೆ ಮೆಟಲ್ ಡಿಟಕ್ಟರ್ ಮೂಲಕವೂ ಅಭ್ಯರ್ಥಿಗಳನ್ನು ತಪಾಸಣೆಗೆ ಒಳಪಡಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಮಾತನಾಡಿ ಪ್ರತಿ ಕೊಠಡಿಯಲ್ಲಿ ೨೦ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದರಿಂದ ಕೇಂದ್ರದ ಮೇಲ್ವಿಚಾರಕರು ಅಭ್ಯರ್ಥಿಗಳ ವರ್ತನೆಯ ವಿಶ್ಲೇಷಣೆ ಮಾಡಬೇಕು, ಈ ಸಂದರ್ಭ ಅವರಿಂದ ಅನುಚಿತ ವರ್ತನೆಗಳು ಕಂಡುಬಂದಲ್ಲಿ ತಪಾಸಣೆ ಮಾಡಬಹುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್ ಮಾತನಾಡಿ ೨೨ ಮಂದಿ ಮುಖ್ಯ ಅಧೀಕ್ಷಕರು, ೨೨ ಮಂದಿ ಸ್ಥಾನಿಕ ಜಾಗೃತದಳ, ೨೫೫ ಮೇಲ್ವಿಚಾರಕರು, ೩೭ ಮಂದಿ ರಿಲಿವರ್ಸ್‌ಗಳನ್ನು ಈ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮುಖ್ಯವಾಗಿ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ, ಕುಡಿಯುವ ನೀರಿನ ವ್ಯವಸ್ಥೆ, ಹೆಚ್ಚುವರಿ ಕೊಠಡಿ ವ್ಯವಸ್ಥೆ, ವಿಶೇಷ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ, ಡಿಯೋ ಕವರೇಜ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಉಪಸ್ಥಿತರಿದ್ದರು.

ಅಭ್ಯರ್ಥಿಗಳಿಗೆ ಸೂಚನೆ

ಕಪ್ಪು ಅಥವಾ ನೀಲಿ ಬಣ್ಣದ ಬಾಲ್ ಪೆನ್ ಬಳಸಬೇಕು, ಗಣಿತ ಅಭ್ಯರ್ಥಿಗಳು ಮಾತ್ರ ಜಾಮಿಟ್ರಿ ಬಾಕ್ಸ್ ಬಳಸಬಹುದು, ಪ್ರವೇಶ ಪತ್ರದಲ್ಲಿ ನಮೂದಿಸಿರುವ ವಿಷಯದ ಪ್ರಶ್ನೆ ಪತ್ರಿಕೆಯನ್ನು ಉತ್ತರಿಸುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರಬೇಕು, ಕೋವಿಡ್-೧೯ ನಿಯಮಾವಳಿಗಳನ್ನು ತಪ್ಪದೆ ಪಾಲಿಸಬೇಕು, ಪ್ರವೇಶ ಪತ್ರವಿಲ್ಲದ ಯಾವುದೇ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಕ್ಯಾಲ್ಕುಲೇಟರ್, ಮೊಬೈಲ್, ಪೇಜರ್, ಬ್ಲೂಟೂತ್ ಹಾಗೂ ಎಲೆಕಟ್ರಾನಿಕ್ಸ್ ವಸ್ತುಗಳನ್ನು ಮತ್ತು ಲಾಗ್‌ಟೇಬಲ್, ಬಿಳಿ ಫ್ಲೂಯಿಡ್, ಬೆಂಕಿಪೊಟ್ಟಣ ಅಥವಾ ಸಿಗರೇಟ್ ಲೈಟರ್ ಮುಂತಾದ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಹುದ್ದೆಗಳ ವಿವರ

ಆಂಗ್ಲ ಭಾಷೆಗೆ ೮೭,ಕನ್ನಡ ಮಾಧ್ಯಮದ ಗಣಿತ ಮತ್ತು ವಿಜ್ಞಾನ-೨೫೪, ಕನ್ನಡ ಮಾಧ್ಯಮದ ಜೀವಶಾಸತ್ರ-೨೫ ಹಾಗೂ ಕನ್ನಡ ಮಾಧ್ಯಮದ ಸಮಾಜ ಪಾಠಗಳು-೨೦೯ ಸೇರಿದಂತೆ ಒಟ್ಟಾರೆ-೫೭೫ ಹುದ್ದೆಗಳ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News