"ಇಂಧನ ಲೂಟಿ ಪ್ರತಿ ದಿನ ಸಣ್ಣ ಹಾಗೂ ದೊಡ್ಡ ಕಂತುಗಳಲ್ಲಿ ಮುಂದುವರಿಯುತ್ತಿದೆ": ಕಾಂಗ್ರೆಸ್ ಆಕ್ರೋಶ

Update: 2022-05-19 17:40 GMT

ಹೊಸದಿಲ್ಲಿ, ಮೇ 19: ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್ಗೆ ರೂ. 3.5 ರೂಪಾಯಿ ಏರಿಕೆಯಾಗಿರುವ ಕುರಿತು ಕೇಂದ್ರ ಸರಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ನರೇಂದ್ರ ಮೋದಿ ಸರಕಾರದ ‘‘ಇಂಧನ ಲೂಟಿ’’ ಪ್ರತಿ ದಿನ ಸಣ್ಣ ಅಥವಾ ದೊಡ್ಡ ಕಂತುಗಳಲ್ಲಿ ನಡೆಯುತ್ತಿದೆ ಎಂದಿದೆ.

ಸರಕಾರ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಪ್ರಕಾರ ದಿಲ್ಲಿಯಲ್ಲಿ ಸಬ್ಸಿಡಿ ರಹಿತ 14.2 ಕಿ.ಗ್ರಾಂ. ಎಲ್ಪಿಜಿ ಸಿಲಿಂಡರಿನ ಬೆಲೆ ಈಗ ಈ ಹಿಂದಿನ 999.5 ರೂಪಾಯಿಯಿಂದ 1,003 ರೂಪಾಯಿಗೆ ಏರಿಕೆಯಾಗಿದೆ. ಈ ತಿಂಗಳಲ್ಲಿ ಎಲ್ಪಿಜಿ ಸಿಲಿಂಡರಿನ ಬೆಲೆ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿ ಹಾಗೂ ಎರಡು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿ.

ಮಾರ್ಚ್ 22ರಂದು ಎಲ್ಪಿಜಿಯ ಪ್ರತಿ ಸಿಲಿಂಡರಿನ ಬೆಲೆ 50 ಪೈಸೆ ಏರಿಕೆಯಾಯಿತು. ಮೇ 7ರಂದು ಅದೇ ಪ್ರಮಾಣದಲ್ಲಿ ಮತ್ತೆ ಏರಿಕೆಯಾಯಿತು. ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ, ಗೃಹ ಬಳಕೆ ಎಲ್ಪಿಜಿ ಸಿಲಿಂಡರಿನ ಬೆಲೆ 45 ದಿನಗಳಲ್ಲಿ 100 ರೂಪಾಯಿ ಏರಿಕೆಯಾದ ಬಳಿಕ ಮತ್ತೆ 3.5 ರೂಪಾಯಿ ಏರಿಕೆಯಾಯಿತು ಎಂದರು.

ವಾಣಿಜ್ಯ ಎಲ್ಪಿಜಿ ಸಿಲಿಂಡರಿನ ಬೆಲೆ 60 ದಿನಗಳಲ್ಲಿ 457.5 ರೂಪಾಯಿ ಏರಿಕೆಯಾದ ಬಳಿಕ ಮತ್ತೆ 8 ರೂಪಾಯಿ ಏರಿಕೆಯಾಯಿತು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸುರ್ಜೇವಾಲ ಅವರು, ಸುಮಾರು 2 ಕೋಟಿ ಕುಟುಂಬಗಳಿಗೆ ಎರಡನೇ ಬಾರಿ ಸಿಲಿಂಡರ್ ತುಂಬಿಸಲು ಸಾಧ್ಯವಾಗದ ನಂತರವೂ ಮೋದಿ ಸರಕಾರದ ಇಂಧನ ಲೂಟಿ ಪ್ರತಿ ದಿನ ಸಣ್ಣ ಹಾಗೂ ದೊಡ್ಡ ಕಂತುಗಳಲ್ಲಿ ಮುಂದುವರಿಯುತ್ತಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News