ಜೀವವೈವಿಧ್ಯ ಉಳಿಸುವತ್ತ...

Update: 2022-05-21 18:34 GMT

ಭೂಮಿಯ ಮೇಲಿನ ಈ ಜೀವಜಾಲ ತಾಣಗಳನ್ನು ಸಂರಕ್ಷಿಸಲು ಹಲವಾರು ಅಂತರ್‌ರಾಷ್ಟ್ರೀಯ ಸಂಘಟನೆಗಳು ಕೆಲಸ ಮಾಡುತ್ತಿವೆ. ಪರಿಸರ ವ್ಯವಸ್ಥೆ ಸಹಭಾಗಿತ್ವ ನಿಧಿ, ಸರಕಾರೇತರ ಸಂಸ್ಥೆಗಳಿಗೆ ಹಣಕಾಸು ಮತ್ತು ತಾಂತ್ರಿಕ ಸಹಾಯವನ್ನು ಒದಗಿಸುತ್ತವೆ ಮತ್ತು ಭೂಮಿಯ ಮೇಲಿನ ಶ್ರೀಮಂತ ಸಸ್ಯ ಮತ್ತು ಪ್ರಾಣಿ ವೈವಿಧ್ಯವನ್ನು ರಕ್ಷಿಸಲು ಸಹಾಯ ಮಾಡುತ್ತಿವೆ.


28ನೇ ವರ್ಷದ ವಿಶ್ವ ಜೀವವೈವಿಧ್ಯ ದಿನವನ್ನು ಇಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಜೀವವೈವಿಧ್ಯವು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗಳ ಜಾಗತಿಕ ಸ್ವತ್ತು. ಮಾನವನ ಆಘಾತಕಾರಿ ಚಟುವಟಿಕೆಗಳಿಂದ ಸಾವಿರಾರು ಜಾತಿಯ ಜೀವಸಂಕುಲ ಗಣನೀಯವಾಗಿ ನಾಶವಾಗುತ್ತಿದೆ. ಜಗತ್ತಿನ ಎಲ್ಲಾ ರಾಷ್ಟ್ರಗಳ ಸರಕಾರ-ಸರಕಾರೇತರ ಸಂಘಟನೆಗಳು, ಸ್ಥಳೀಯ ಜನರು ಮತ್ತು ಸ್ಥಳೀಯ ವೈಜ್ಞಾನಿಕ ಸಮುದಾಯಗಳು ಜೀವವೈವಿಧ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುತ್ತವೆ. ವಿಶ್ವದಾದ್ಯಂತ ಜೀವವೈವಿಧ್ಯದ ಸಂರಕ್ಷಣೆ, ಸಮರ್ಥನೀಯ ಬಳಕೆಗಾಗಿ ವೈಜ್ಞಾನಿಕ ಅಭಿವೃದ್ಧಿ, ಜೈವಿಕ ಭದ್ರತೆಯ ಬಳಕೆಯಿಂದ ಉದ್ಭವಿಸುವ ಪ್ರಯೋಜನಗಳ ನ್ಯಾಯೋಚಿತ ಹಂಚಿಕೆ, ರಾಷ್ಟ್ರೀಯ ಜೀವವೈವಿಧ್ಯ ತಂತ್ರಗಳು, ಕ್ರಿಯಾ ಯೋಜನೆಗಳ ಸೃಷ್ಟಿ ಮತ್ತು ಅನುಷ್ಠಾನ ಇತ್ಯಾದಿಗಳ ಬಗ್ಗೆ ಗಮನ ಕೊಡಲಾಗಿದೆ. 2011ರಿಂದ 2020 ಕಾರ್ಯತಂತ್ರ ಯೋಜನೆಯನ್ನು ಅಳವಡಿಸಿದ ನಂತರ, ಹಲವಾರು ಜೀವವೈವಿಧ್ಯ ಗುರಿಗಳ ಸಾಧನೆಯಲ್ಲಿ ಮಹತ್ತರವಾದ ಹೆಜ್ಜೆಗಳನ್ನು ಸ್ಥಾಪಿಸಲಾಗಿ ಈ ನ್ಯಾಯಸಮ್ಮತವಾದ ಯೋಜನೆಯನ್ನು 196 ರಾಷ್ಟ್ರಗಳು ಅಂಗೀಕರಿಸಿವೆ. ಜೀವವೈವಿಧ್ಯ ತಾಣ ಒಂದು ಜೈವಿಕ ಭೂಗೋಳ ಪ್ರದೇಶವಾಗಿದ್ದು, ಗಮನಾರ್ಹವಾಗಿ ವಿನಾಶದ ಬೆದರಿಕೆಗೆ ಒಳಗಾಗಿರುತ್ತದೆ. ಮೈಯರ್ಸ್ ನಕ್ಷೆ -2000ದ ಪ್ರಕಾರ ಜೀವವೈವಿಧ್ಯ ತಾಣ ಎನಿಸಿಕೊಳ್ಳಲು ಎರಡು ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸಬೇಕು: ಒಂದು ಕನಿಷ್ಠ ಶೇ. 0.5 ಅಥವಾ 1,500 ಜಾತಿಯ ಸಸ್ಯಗಳನ್ನು ಹೊಂದಿರಬೇಕು ಅಥವಾ ಅದರ ಮೂಲ ಶೇ. 70 ಪ್ರಾಥಮಿಕ ಸಸ್ಯವರ್ಗ ನಾಶವಾಗಿರಬೇಕು. ವಿಶ್ವದಾದ್ಯಂತ 36 ಪ್ರದೇಶಗಳು ಈ ಮಾನದಂಡವನ್ನು ಹೊಂದಿದ್ದು ವಿಶ್ವದ ಸುಮಾರು ಶೇ. 60 ಸಸ್ಯಗಳು, ಪಕ್ಷಿಗಳು, ಸಸ್ತನಿ, ಸರೀಸೃಪ ಮತ್ತು ಉಭಯಚರಗಳ ಜಾತಿಗಳು ಮಾತ್ರ ಉಳಿದುಕೊಂಡಿವೆ. ಭೂಮಿಯ ಮೇಲಿನ ಈ ಜೀವಜಾಲ ತಾಣಗಳನ್ನು ಸಂರಕ್ಷಿಸಲು ಹಲವಾರು ಅಂತರ್‌ರಾಷ್ಟ್ರೀಯ ಸಂಘಟನೆಗಳು ಕೆಲಸ ಮಾಡುತ್ತಿವೆ. ಪರಿಸರ ವ್ಯವಸ್ಥೆ ಸಹಭಾಗಿತ್ವ ನಿಧಿ, ಸರಕಾರೇತರ ಸಂಸ್ಥೆಗಳಿಗೆ ಹಣಕಾಸು ಮತ್ತು ತಾಂತ್ರಿಕ ಸಹಾಯವನ್ನು ಒದಗಿಸುತ್ತವೆ ಮತ್ತು ಭೂಮಿಯ ಮೇಲಿನ ಶ್ರೀಮಂತ ಸಸ್ಯ ಮತ್ತು ಪ್ರಾಣಿ ವೈವಿಧ್ಯವನ್ನು ರಕ್ಷಿಸಲು ಸಹಾಯ ಮಾಡುತ್ತಿವೆ. ಇದರ ಜೊತೆಗೆ ವರ್ಲ್ಡ್ ವೈಲ್ಡ್ ಫಂಡ್ ಫಾರ್ ನೇಚರ್, ಬರ್ಡ್ ಲೈಫ್ ಇಂಟರ್‌ನ್ಯಾಷನಲ್, ಅಂತರ್‌ರಾಷ್ಟ್ರೀಯ ಸಸ್ಯ ಜೀವನ, ನ್ಯಾಷನಲ್ ಜಿಯಾಗ್ರಫಿಕ್ ಸೊಸೈಟಿ ಇತ್ಯಾದಿ ಸಂಸ್ಥೆಗಳು ಜೀವವೈವಿಧ್ಯ ತಾಣಗಳನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿವೆ. ಭಾರತದಲ್ಲಿ ಅರಣ್ಯಗಳ ನಾಶ ಮತ್ತು ಜೈವಿಕ ತಾಣಗಳನ್ನು ನಿಯಂತ್ರಿಸಲು ಇಅಅ ಆ್ಯಕ್ಟನ್ನು ಸ್ಥಾಪಿಸಲಾಗಿದೆ.

 ಬ್ರಿಟಿಷ್ ಜೀವಶಾಸ್ತ್ರಜ್ಞ 1988ರಲ್ಲಿ ''ಜೀವವೈವಿಧ್ಯ ಜಾಲತಾಣ'' ಎಂಬ ಹೆಸರನ್ನು ನೀಡಿ, 1990ರಲ್ಲಿ ಮತ್ತೆ 8 ಮೆಡಿಟರೇನಿಯನ್ ಮಾದರಿಯ ಪರಿಸರ ವ್ಯವಸ್ಥೆಗಳನ್ನು ಸೇರಿಸಿ 1996ರಲ್ಲಿ ವ್ಯಾಪಕ ಜಾಗತಿಕ ವಿಮರ್ಶೆಯನ್ನು ಕೈಗೊಂಡಿದ್ದ. ಅದು ಜೀವವೈವಿಧ್ಯ ತಾಣಗಳಿಗೆ ಪರಿಣಾತ್ಮಕ ಮಿತಿಗಳನ್ನು ಪರಿಚಯಿಸಿತು. ಜೀವವೈವಿಧ್ಯದ ದೃಷ್ಟಿಯಿಂದ ಭಾರತ ವಿಶ್ವದಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ನೈಸರ್ಗಿಕ ವ್ಯತ್ಯಾಸದೊಂದಿಗೆ ಜನಸಂಖ್ಯಾಶಾಸ್ತ್ರದಲ್ಲಿ ಕೂಡ ಪ್ರತಿಫಲಿಸುತ್ತದೆ. ಜನಸಮುದಾಯಗಳು, ಭೂಮಿಯ ಮೇಲಿನ ಜೀವಿವೈವಿಧ್ಯದ ಮೇಲೆ ಅನೇಕ ರೀತಿಯಲ್ಲಿ ಅವಲಂಬಿಸಿವೆ. ಜಗತ್ತಿನಲ್ಲಿ ಭಾರತಕ್ಕೆ ಹೋಲಿಸಿದರೆ ಆಫ್ರಿಕಾ ಖಂಡ ಮಾತ್ರ ಭಾಷೆಗಳು, ಆನುವಂಶಿಕತೆ ಮತ್ತು ಸಾಂಸ್ಕೃತಿಕ ವೈವಿಧ್ಯದಲ್ಲಿ ಹಿರಿದಾದುದು. ಭಾರತದ ಹೆಚ್ಚಿನ ಜನಸಂಖ್ಯೆಯಿಂದ ಜೀವವೈವಿಧ್ಯದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನೂ ಬೀರಿವೆ. ದೇಶದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯಗಳು ಮುಂಗಾರು/ಹಿಂಗಾರು ಮಳೆಮಾರುತಗಳ ಆವರ್ತಕ ಪರಿಣಾಮದಿಂದ ಹೆಚ್ಚು ಮಳೆಯನ್ನು ಪಡೆಯುತ್ತವೆ. ಈ ಪ್ರದೇಶಗಳು ತೇವಾಂಶವುಳ್ಳ ಇಳಿಜಾರು ಕಾಡು ಮತ್ತು ಮಳೆಕಾಡುಗಳಿಂದ ಕೂಡಿವೆ. ಉನ್ನತ ಜಾತಿಯ ಜೀವವೈವಿಧ್ಯ ಮತ್ತು ಉನ್ನತ ಮಟ್ಟದ ಸ್ಥಳೀಯತೆಯನ್ನು ಹೊಂದಿದೆ. ಇಲ್ಲಿರುವ ಸುಮಾರು ಶೇ. 77 ಉಭಯಚರಗಳು, ಶೇ. 62 ಸರೀಸೃಪ ಜಾತಿಗಳು ಬೇರೆ ಯಾವ ಜೀವತಾಣದಲ್ಲೂ ಕಂಡುಬರುವುದಿಲ್ಲ.

ಭಾರತಕ್ಕೆ ದಕ್ಷಿಣದಲ್ಲಿರುವ ಶ್ರೀಲಂಕಾ ಕೂಡ ಇದೇ ರೀತಿಯ ಜೀವವೈವಿಧ್ಯವನ್ನು ಹೊಂದಿದೆ. ಸುಮಾರು 6,000 ಜಾತಿಯ ಸಸ್ಯಗಳು ಇಲ್ಲಿದ್ದು ಅವುಗಳಲ್ಲಿ 3,000 ಸ್ಥಳೀಯ ಜಾತಿಯ ಸಸ್ಯಗಳಿವೆ. ಈಗ ವಿಶ್ವದಾದ್ಯಂತ ಹರಡಿಕೊಂಡಿರುವ ಕಪ್ಪುಮೆಣಸು, ಏಲಕ್ಕಿಯ ಮೂಲ ಪಶ್ಚಿಮ ಘಟ್ಟಗಳೇ ಆಗಿದೆ. ದಕ್ಷಿಣದ ಅಗಾಸ್ತ್ಯಮಲೈ ಬೆಟ್ಟಗಳಲ್ಲಿ ಹೆಚ್ಚು ಜೀವವೈವಿಧ್ಯ ಇದ್ದು 450 ಪಕ್ಷಿ ಜಾತಿಗಳು, 140 ಸಸ್ತನಿ ಪ್ರಾಣಿಗಳು, 260 ಸರೀಸೃಪಗಳು ಮತ್ತು 175 ಉಭಯಚರಗಳು ಇಲ್ಲಿವೆ. ಈಗ ಜೀವವೈವಿಧ್ಯ ತೀವ್ರ ಬೆದರಿಕೆಗೆ ಸಿಲುಕಿಕೊಂಡಿದೆ. ಪರಿಣಾಮವಾಗಿ 1,90,000 ಚ.ಕಿ.ಮೀ. ವಿಸ್ತೀರ್ಣದಲ್ಲಿದ್ದ ಸಸ್ಯವರ್ಗ ಈಗ 1,43,000 ಚ.ಕಿ.ಮೀ.ಗೆ ಸೀಮಿತಗೊಂಡಿದೆ. ಶ್ರೀಲಂಕಾದಲ್ಲಿ ಕೇವಲ ಶೇ. 1.5 ಅರಣ್ಯ ಮಾತ್ರ ಉಳಿದುಕೊಂಡಿದೆ. ಪೂರ್ವ ಹಿಮಾಲಯ ಭೌಗೋಳಿಕವಾಗಿ ಇತ್ತೀಚಿನ ಮತ್ತು ಎತ್ತರ ಪರ್ವತ ಶ್ರೇಣಿಗಳನ್ನು ಹೊಂದಿದ್ದು, ಇದು ಎವರೆಸ್ಟ್ ಶಿಖರ ಮತ್ತು ಕೆ2 ಸೇರಿದಂತೆ ಅತ್ಯುನ್ನತ ಶಿಖರಗಳ ನೆಲೆಯಾಗಿದೆ. ಹಿಮಾಲಯ ವಿಶ್ವದ ಕೆಲವು ಪ್ರಮುಖ ನದಿಗಳ ಜಾಲವನ್ನು ಹೊಂದಿದ್ದು, ಅವುಗಳ ಜಲಾನಯನ 18 ದೇಶಗಳಲ್ಲಿ ಹರಡಿಕೊಂಡಿದ್ದು ಒಟ್ಟು 300 ಕೋಟಿ ಜನರ ವಾಸಸ್ಥಳವಾಗಿದೆ. ಹಿಮಾಲಯಗಳು ದಕ್ಷಿಣ ಏಶ್ಯದ ಸಂಸ್ಕೃತಿಯನ್ನು ಗಾಢವಾಗಿ ರೂಪಿಸಿವೆ. ಭೂವೈಜ್ಞಾನಿಕವಾಗಿ, 40-50 ದಶಲಕ್ಷ ವರ್ಷಗಳ ಹಿಂದೆ ವರ್ಷಕ್ಕೆ 15 ಸೆ.ಮೀ. ವೇಗದಲ್ಲಿ ಅಂಟಾರ್ಕ್‌ಟಿಕ್ ಕಡೆಯಿಂದ ಉತ್ತರಕ್ಕೆ ಚಲಿಸುತ್ತಾ ಬಂದ ಭಾರತ ಭೂಫಲಕ ಈ ಪ್ರದೇಶದಲ್ಲಿ ಯುರೇಶ್ಯ ಫಲಕದ ಜೊತೆಗೆ ಘರ್ಷಣೆಗೆ ನಿಂತುಕೊಂಡ ಕಾರಣ ಹಿಮಾಲಯಗಳು ಉದ್ಭವಿಸಿದವು.

ಪೂರ್ವ ಹಿಮಾಲಯ ಜೀವವೈವಿಧ್ಯ ತಾಣಗಳಲ್ಲಿ 163 ಜಾತಿ ಪ್ರಾಣಿಗಳಿದ್ದು ಅವುಗಳಲ್ಲಿ ಒಂದು ಕೊಂಬಿನ ಖಡ್ಗಮೃಗ, ನೀರೋತಿ, ಏಶ್ಯದ ನೀರೆಮ್ಮೆ, 45 ಸಸ್ತನಿಗಳು, 50 ಹಕ್ಕಿಗಳು, 17 ಸರೀಸೃಪಗಳು, 12 ಉಭಯಚರಗಳು, 3 ಅಕಶೇರುಕಗಳು ಮತ್ತು 36 ಸಸ್ಯ ಜಾತಿಗಳು ಸೇರಿವೆ. ಸುಮಾರು 10,000 ಜಾತಿಯ ಸಸ್ಯಗಳಿವೆ, ಅದರಲ್ಲಿ 3/1 ಭಾಗ ಸ್ಥಳೀಯ ಮತ್ತು ವಿಶ್ವದಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ. ಕೆಲವು ಸಸ್ಯಗಳ ಜೊತೆಗೆ ಎರ್ಮನಿಯಾ ಸಸ್ಯಜಾತಿ ವಾಯುವ್ಯ ಹಿಮಾಲಯದಲ್ಲಿ 6300 ಮೀ.ಗಳ ಎತ್ತರದಲ್ಲಿ ಬೆಳೆಯುತ್ತದೆ. ಹಿಮಾಲಯನ್ ಕ್ವಿಲ್, ಚೀರ್ ಫೆಸಂಟ್, ಪಾಶ್ಚಾತ್ಯ ಟ್ರೋಗೋಪಾನ್‌ಗಳು ಮತ್ತು ಹಿಮಾಲಯನ್ ರಣಹದ್ದುಗಳು, ಬಿಳಿ ಹೊಟ್ಟೆಯ ನಾರಾಯಣಿ ಪಕ್ಷಿ ಎಲ್ಲವೂ ಅಳಿವಿನ ಅಂಚಿನಲ್ಲಿವೆ. ಕಳೆದ 28 ವರ್ಷಗಳಿಂದ ಜೀವವೈವಿಧ್ಯವನ್ನು ಆಚರಣೆ ಮಾಡುತ್ತಿದ್ದು, ಈ ಮೂಲಕ ಸಮರ್ಥನೀಯ ಕೃಷಿಕಾಳಜಿ, ಮರುಭೂಮಿ, ಭೂಮಿಯ ಅವನತಿ ಮತ್ತು ಬರ; ನೀರು-ನೈರ್ಮಲ್ಯ; ಆರೋಗ್ಯ-ಸುಸ್ಥಿರ ಅಭಿವೃದ್ಧಿ; ವಿಜ್ಞಾನ-ತಂತ್ರಜ್ಞಾನ, ಸಾಮರ್ಥ್ಯ ನಿರ್ಮಾಣ; ನಗರಗಳ ಸ್ಥಿತಿಸ್ಥಾಪಕತ್ವ ಮತ್ತು ರೂಪಾಂತರ; ಸಮರ್ಥನೀಯ ಸಾರಿಗೆ; ಹವಾಮಾನ ಬದಲಾವಣೆ, ವಿಪತ್ತು ಅಪಾಯ ಕಡಿತ; ಸಾಗರಗಳು; ಅರಣ್ಯಗಳು; ಸ್ಥಳೀಯ ಜನರ-ಆಹಾರ ಭದ್ರತೆಯಲ್ಲಿ ಜೀವವೈವಿಧ್ಯ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವುದನ್ನು ತಿಳಿಸುತ್ತಾ ಬರಲಾಗಿದೆ. ಈ ವರ್ಷದ ಧ್ಯೇಯವಾಕ್ಯ ''ನಾವು ಜೀವವೈವಿಧ್ಯದ ಒಂದು ಭಾಗ'' ಎನ್ನುವುದು.

Writer - ಡಾ. ಎಂ. ವೆಂಕಟಸ್ವಾಮಿ

contributor

Editor - ಡಾ. ಎಂ. ವೆಂಕಟಸ್ವಾಮಿ

contributor

Similar News