ಈಶಾನ್ಯದಲ್ಲಿ ಪ್ರವಾಹ ಸಂಕಷ್ಟ: 29 ಜೀವ ಬಲಿ

Update: 2022-05-22 02:00 GMT

ಗುವಾಹತಿ: ಅಸ್ಸಾಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಕಳೆದ ಒಂಬತ್ತು ದಿನಗಳಿಂದ ಇರುವ ಪ್ರವಾಹ ಪರಿಸ್ಥಿತಿಯಿಂದಾಗಿ ಕನಿಷ್ಠ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಭೂಕುಸಿತ ಮತ್ತು ತೀವ್ರ ಪ್ರವಾಹದಿಂದ ಕಂಗೆಟ್ಟಿರುವ ಈಶಾನ್ಯ ಭಾರತ ಇನ್ನೂ ಪ್ರವಾಹ ಸಂಕಷ್ಟದ ಸುಳಿಯಿಂದ ಹೊರಬಂದಿಲ್ಲ.

ಶನಿವಾರ ಪ್ರವಾಹದಿಂದಾಗಿ ಮತ್ತೆ ನಾಲ್ಕು ಮಂದಿ ಮೃತಪಟ್ಟಿರುವುದನ್ನು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ದೃಢಪಡಿಸಿದೆ. ಇದರಿಂದಾಗಿ ಅಸ್ಸಾಂನಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಜೀವ ಕಳೆದುಕೊಂಡವರ ಸಂಖ್ಯೆ 18ಕ್ಕೇರಿದೆ. ಈ ತಿಂಗಳ 14ರಿಂದೀಚೆಗೆ 13 ಮಂದಿ ನೀರುಪಾಲಾಗಿದ್ದರೆ, ಐದು ಮಂದಿ ಭೂಕುಸಿತದ ವೇಳೆ ಮೃತಪಟ್ಟಿದ್ದಾರೆ. ಮೇಘಾಲಯದಲ್ಲಿ ದಿಢೀರ್ ಪ್ರವಾಹಕ್ಕೆ ನಾಲ್ಕು ಮಂದಿ ಹಾಗೂ ಅರುಣಾಚಲ ಪ್ರದೇಶದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದಾರೆ.

ತೀವ್ರ ಬಾಧಿತವಾಗಿರುವ ಅಸ್ಸಾಂ ನಿಧಾನವಾಗಿ ಸಹಜತೆಯತ್ತ ಮರಳುತ್ತಿದ್ದು, ಪ್ರವಾಹ ಸಂಕಷ್ಟಕ್ಕೆ ಸಿಲುಕಿರುವವರ ಸಂಖ್ಯೆ 7.1 ಲಕ್ಷದಿಂದ 6.8 ಲಕ್ಷಕ್ಕೆ ಇಳಿದಿದೆ. ಆದರೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದವರ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ ಎಂದು ಎಎಸ್‌ಡಿಎಂಎ ಸ್ಪಷ್ಟಪಡಿಸಿದೆ.
ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಶವ, ಇಟಾನಗರದಲ್ಲಿ ಭೂಕುಸಿತದ ಅವಶೇಷಗಳಡಿ ಪತ್ತೆಯಾಗಿದ್ದು, ಇದೇ ಸ್ಥಳದಿಂದ ಮತ್ತೆರಡು ಮಂದಿ ಪುರುಷರ ದೇಹವನ್ನೂ ಹೊರ ತೆಗೆಯಲಾಗಿದೆ. ಮಣ್ಣಿನ ಮನೆ ಕುಸಿತದಿಂದ ಈ ದುರಂತ ಸಂಭವಿಸಿತ್ತು. ಕುರುಂಗ್ ಕುಮೆ ಜಿಲ್ಲೆಯಲ್ಲಿ ಮತ್ತೆ ಮೂರು ಮಂದಿ ಭೂಕುಸಿತಕ್ಕೆ ಬಲಿಯಾಗಿದ್ದರು.

ಮೇಘಾಲಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಶುಕ್ರವಾರದ ವರೆಗೆ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಮೂವರು ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News