ಪಶ್ಚಿಮ ಬಂಗಾಳ: ಸಿಎಂ ಸೂಚನೆ ಮೇರೆಗೆ ಪೊಲೀಸರ ಭಾರೀ ಕಾರ್ಯಾಚರಣೆ; ಸಾವಿರಕ್ಕೂ ಅಧಿಕ ಕಚ್ಚಾ ಬಾಂಬ್‌ ಪತ್ತೆ

Update: 2022-05-22 07:56 GMT
Photo: Twitter

ಕೊಲ್ಕತ್ತಾ: ಬಂಗಾಳದ ಬಿರ್‌ಭೂಮ್ ಜಿಲ್ಲೆಯ ಬೊಗ್ತೋಯ್‌ನಲ್ಲಿ ನಡೆದ ಹತ್ಯಾಕಾಂಡದ ಬಳಿಕ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ಪೊಲೀಸರು ರಾಜ್ಯಾದ್ಯಂತ ಶಸ್ತ್ರಾಸ್ತ್ರ ಮತ್ತು ಬಾಂಬ್‌ಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಪೂರ್ವ ಮೇದಿನಿಪುರ ಜಿಲ್ಲೆಯ ಮೊಯ್ನಾ ಪೊಲೀಸ್ ಠಾಣಾ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ನಡೆಸುವ ಮೂಲಕ ಪೊಲೀಸರು ಒಂದು ಸಾವಿರಕ್ಕೂ ಹೆಚ್ಚು ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಬಾಂಬ್‌ಗಳು ಪತ್ತೆಯಾದ ಬಳಿಕ ಆ ಪ್ರದೇಶದಲ್ಲಿ ಭಾರೀ ಸಂಚಲನ ಉಂಟಾಗಿದೆ.  

ಸದ್ಯ, ಅವುಗಳನ್ನು ಸ್ವಾಧೀನಪಡಿಸಿಕೊಂಡಿರುವ ತನಿಖಾ ತಂಡ ನಾಶಪಡಿಸುವ ಕಾರ್ಯದಲ್ಲಿ ತೊಡಗಿದೆ. ಇಲ್ಲಿನ ಹೊಗಳ ಅರಣ್ಯದಲ್ಲಿ 15 ಡ್ರಮ್‌ಗಳಲ್ಲಿ ಬಾಂಬ್‌ಗಳನ್ನು ತುಂಬಲಾಗಿತ್ತು ಎಂದು ಜಿಲ್ಲೆಯ ಹಿರಿಯ ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಇಲ್ಲಿ ಬಾಂಬ್ ಅನ್ನು ಏಕೆ ಮತ್ತು ಯಾರು ಅಡಗಿಸಿಟ್ಟಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೊಗ್ಲಾ ಅರಣ್ಯದ ಬಕ್ಚಾ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಡ್ರಮ್‌ಗಳಲ್ಲಿ ಜೀವಂತ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಸ್ಥಳೀಯರು ಶನಿವಾರ ಮಾಹಿತಿ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ಕುಮಾರ್ ತಿಳಿಸಿದ್ದಾರೆ. ತಕ್ಷಣ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ತಲುಪಿ, ಅಲ್ಲಿಂದ ಜೀವಂತ ಬಾಂಬ್‌ಗಳನ್ನು ತುಂಬಿದ 15 ಡ್ರಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚು. ಬಾಂಬ್ ನಿಷ್ಕ್ರಿಯ ದಳ ಈ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಇಷ್ಟು ದೊಡ್ಡ ಪ್ರಮಾಣದ ಬಾಂಬ್‌ಗಳನ್ನು ಯಾರು ಸಂಗ್ರಹಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು jagaran.com ವರದಿ ಮಾಡಿದೆ.

ಬಿರ್ಭೂಮ್ ಹತ್ಯಾಕಾಂಡದ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಕ್ರಮವಾಗಿ ಸಂಗ್ರಹಿಸಲಾದ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಇತ್ತೀಚೆಗಷ್ಟೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಇದಾದ ಬಳಿಕ ಸುಮಾರು ಒಂದು ವಾರದವರೆಗೆ ಪೊಲೀಸರು ಅಕ್ರಮ ಶಸ್ತ್ರಾಸ್ತ್ರಗಳು, ಬಾಂಬ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಸಕ್ರಿಯರಾಗಿದ್ದಾರೆ.

ಪೂರ್ವ ಮೇದಿನಿಪುರ ಜಿಲ್ಲೆ ರಾಜಕೀಯ ಹಿಂಸಾಚಾರದ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿ ಇಷ್ಟೊಂದು ಬಾಂಬ್ ಗಳು ಸಿಕ್ಕಿದ ಘಟನೆಯ ನಂತರ ರಾಜಕೀಯ ಆರೋಪಗಳೂ ಶುರುವಾಗಿವೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಇದಕ್ಕೆ ಹೊಣೆ ಎಂದು ಬಿಜೆಪಿ ಆರೋಪಿಸಿದ್ದು, ಆ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹರಡುವ ಸಲುವಾಗಿ ಬಾಂಬ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News