ರಾಜ್ಯಗಳಿಗೆ ತಿಳಿಸದೆ ಇಂಧನ ದರ ಏರಿಸಿದ ಕೇಂದ್ರ, ರಾಜ್ಯಗಳ ಬಳಿ ತೆರಿಗೆ ಕಡಿತಕ್ಕೆ ಕೇಳುತ್ತಿದೆ: ತ.ನಾ ಸಚಿವ ಆಕ್ರೋಶ

Update: 2022-05-22 08:03 GMT
Photo: Facebook

ಚೆನ್ನೈ: ಯಾವ ರಾಜ್ಯವನ್ನೂ ಕೇಳದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿರುವ ಕೇಂದ್ರ ಸರ್ಕಾರ ಈಗ ರಾಜ್ಯಗಳಿಗೆ ಬೆಲೆ ಇಳಿಸುವಂತೆ ಹೇಳುತ್ತಿರುವುದು ಒಕ್ಕೂಟ ವ್ಯವಸ್ಥೆಯೇ? ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಪ್ರಶ್ನಿಸಿದ್ದಾರೆ.

  ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ 8 ಮತ್ತು 6 ರುಪಾಯಿಯಂತೆ ಕಡಿತ ಮಾಡಿರುವುದಾಗಿ ಹೇಳಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ʼಎಲ್ಲಾ ರಾಜ್ಯ ಸರ್ಕಾರಗಳೂ ಅದರಲ್ಲಿಯೂ ವಿಶೇಷವಾಗಿ 2021ರ ನವೆಂಬರ್‌ನಲ್ಲಿ ತೆರಿಗೆ ಕಡಿತ ಮಾಡದ ರಾಜ್ಯಗಳು, ಕೇಂದ್ರ ಸರ್ಕಾರದಂತೆ ತೆರಿಗೆ ಕಡಿತಗೊಳಿಸಿ, ಸಾಮಾನ್ಯ ನಾಗರಿಕರಿಗೆ ಬೆಲೆ ಏರಿಕೆಯಿಂದ ನೆಮ್ಮದಿ ನೀಡುವಂತೆ ನಾನು ಒತ್ತಾಯಿಸಲು ಬಯಸುತ್ತೇನೆ’ ಎಂದು ಆಗ್ರಹಿಸಿದ್ದರು. ಆದರೆ, ಕೇಂದ್ರದ ಈ ನಿಲುವನ್ನು ತ್ಯಾಗರಾಜನ್‌ ಪ್ರಶ್ನಿಸಿದ್ದಾರೆ.

ತಮಿಳುನಾಡಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ತೆರಿಗೆ ಕಡಿತಗೊಳಿಸುವ ಪ್ರಸ್ತಾವವಿಲ್ಲ ಎಂದು ಹೇಳಿದ ತಮಿಳುನಾಡು ಹಣಕಾಸು ಸಚಿವ, ರಾಜ್ಯಗಳು ತೆರಿಗೆ ಕಡಿಮೆ ಮಾಡಬೇಕೆಂದು ನಿರೀಕ್ಷಿಸುವುದು ನ್ಯಾಯವಲ್ಲ, ಸಮಂಜಸವೂ ಅಲ್ಲ ಎಂದು ಹೇಳಿದ್ದಾರೆ.

“2014 ರಿಂದ ಈ ವರೆಗೆ ಲೀಟರ್‌ ಪೆಟ್ರೋಲ್ ಮೇಲೆ ₹23 (+250%) ಮತ್ತು ಡೀಸೆಲ್ ಮೇಲೆ ₹29 (+900%) ರಷ್ಟು ತೆರಿಗೆಯನ್ನು ಏರಿಸುವಾಗ ಕೇಂದ್ರ ಸರ್ಕಾರ ರಾಜ್ಯಗಳಿಗೆ ತಿಳಿಸಲೂ ಇಲ್ಲ, ರಾಜ್ಯಗಳ ಅಭಿಪ್ರಾಯ ಕೇಳಲೂ ಇಲ್ಲ. ಈಗ ಅವರು ಮಾಡಿದ ಹೆಚ್ಚಳದ ಶೇ 50% ರಷ್ಟನ್ನು ಕಡಿತ ಮಾಡಿ, ರಾಜ್ಯಗಳಿಗೂ ಹಾಗೇ ಮಾಡಲು ಕೇಳಲಾಗುತ್ತಿದೆ. ಇದೇನಾ ಒಕ್ಕೂಟ ವ್ಯವಸ್ಥೆ?” ಎಂದು ಪ್ರಶ್ನಿಸಿ ತ್ಯಾಗರಾಜನ್ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News