ಕಸ್ಟಡಿ ಸಾವು ಆರೋಪಿಸಿ ಪೊಲೀಸ್‌ ಠಾಣೆಗೆ ಬೆಂಕಿ; ಬುಲ್ಡೋಝರ್‌ ಬಳಸಿ ಆರೋಪಿಗಳ ಮನೆ ಧ್ವಂಸಗೊಳಿಸಿದ ಅಸ್ಸಾಂ ಸರ್ಕಾರ

Update: 2022-05-22 18:23 GMT
Photo: Twitter

ಗುವಾಹಟಿ,ಮೇ 22: ವ್ಯಕ್ತಿಯೋರ್ವನ ಕಸ್ಟಡಿ ಸಾವಿನ ಆರೋಪದಲ್ಲಿ ಶನಿವಾರ ಬತಾದ್ರಬಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪಿಗಳ ಮನೆಗಳನ್ನು ನಾಗಾಂವ್ ಜಿಲ್ಲಾಡಳಿತವು ರವಿವಾರ ನೆಲಸಮಗೊಳಿಸಿದೆ. ಪೊಲೀಸರ ಬೆಂಬಲದೊಂದಿಗೆ ಜಿಲ್ಲಾಡಳಿತವು ಏಳು ಮನೆಗಳನ್ನು ಧ್ವಂಸಗೊಳಿಸಿದೆ ಎಂದು ಸಲ್ನಾಬಾರಿ ಪ್ರದೇಶದ ನಿವಾಸಿಗಳು ಸುದ್ದಿಗಾರರಿಗೆ ತಿಳಿಸಿದರು.

ಶಫೀಕುಲ್ ಇಸ್ಲಾಮ್ ಎಂಬ ಮೀನು ವ್ಯಾಪಾರಿ ಶುಕ್ರವಾರ ಸಂಜೆ ಶಿವ ಸಾಗರ್ ಗೆ ತೆರಳಲು ಬಸ್ ಹಿಡಿಯಲು ಹೋಗುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದರು. ಶಫೀಕುಲ್ ಬಿಡುಗಡೆಗಾಗಿ ಪೊಲೀಸರು 10,000 ರೂ. ಮತ್ತು ಒಂದು ಬಾತುಕೋಳಿಯನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ಆತನ ಕುಟುಂಬವು ಆರೋಪಿಸಿದೆ.‘ನಮಗೆ ಬಾತುಕೋಳಿಯನ್ನು ನೀಡಲು ಮಾತ್ರ ಸಾಧ್ಯವಿತ್ತು. ಹೀಗಾಗಿ ಪೊಲೀಸರು ನನ್ನ ಪತಿಯನ್ನು ಥಳಿಸಿ ಕೊಂದಿದ್ದಾರೆ ’ ಎಂದು ಶಫೀಕುಲ್ ಪತ್ನಿ ಆರೋಪಿಸಿದರು.

ಜಿಲ್ಲಾಡಳಿತವು ಶಫೀಕುಲ್ ಮನೆಯನ್ನೂ ನೆಲಸಮಗೊಳಿಸಿದೆ. ತಮಗೆ ಯಾವುದೇ ನೋಟಿಸ್ ನೀಡಿರಲಿಲ್ಲ ಮತ್ತು ನೆಲಸಮ ಕಾರ್ಯಾಚರಣೆ ನಡೆಯುತ್ತಿದ್ದಾಗ ಪ್ರದೇಶದಲ್ಲಿ ಜನರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು ಎಂದು ನಿವಾಸಿಗಳು ತಿಳಿಸಿದರು. ಅಪರಾಧ ಪ್ರಕರಣದ ಆರೋಪಿಯ ಮನೆಯನ್ನು ನೆಲಸಮಗೊಳಿಸಲು ಭಾರತೀಯ ಕಾನೂನಿನಲ್ಲಿ ಅವಕಾಶವಿಲ್ಲವಾದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ನಿಯಮಿತವಾಗಿ ನೆಲಸಮ ಕಾರ್ಯಾಚರಣೆಗಳು ನಡೆಯುತ್ತಿವೆ.

ಶನಿವಾರ ಬೆಳಿಗ್ಗೆ ಶಫೀಕುಲ್ ಪತ್ನಿ ಠಾಣೆಗೆ ತೆರಳಿದ್ದಾಗ ಆತನನ್ನು ನಾಗಾಂವ್ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಆಕೆ ಆಸ್ಪತ್ರೆಗೆ ಧಾವಿಸಿದಾಗ ಆತ ಮೃತಪಟ್ಟಿದ್ದ. ಈ ವಿಷಯ ಗೊತ್ತಾದಾಗ ಆಕ್ರೋಶಿತ ಜನರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆಗೈದು ಠಾಣೆಗೆ ಬೆಂಕಿ ಹಚ್ಚಿದ್ದರು ಎನ್ನಲಾಗಿದೆ.

ಅಪರಿಚಿತ ಮಹಿಳೆಯೋರ್ವಳು ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಮೇಲೆ ಬೆಂಕಿ ಉರಿಸಲ್ಪಡುವ ದ್ರವವೊಂದನ್ನು ಎರಚುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳಲಾಗಿರುವ ವೀಡಿಯೊಗಳು ತೋರಿಸಿವೆ. ದಾಳಿಯಲ್ಲಿ ಭಾಗವಹಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದ್ದು,ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಇತರರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದರು.

ಶಫೀಕುಲ್ ಪಾನಮತ್ತನಾಗಿದ್ದ ಮತ್ತು ಆತನನ್ನು ಠಾಣೆಗೆ ಕರೆತರಲಾಗಿತ್ತು. ಈ ಬಗ್ಗೆ ಆತನ ಕುಟುಂಬಕ್ಕೆ ಮಾಹಿತಿ ನೀಡಲಾಗಿತ್ತು ಮತ್ತು ಅವರು ಠಾಣೆಗೆ ಭೇಟಿ ನೀಡಿದ್ದರು. ಶನಿವಾರ ಅಸ್ವಸ್ಥಗೊಂಡಿದ್ದ ಆತನನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು,ಬಳಿಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ ಎಂದು ಎಸ್ಪಿ ಲೀನಾ ಡೋಲಿ ತಿಳಿಸಿದರು.
ಪೊಲೀಸರು ಲಂಚಕ್ಕಾಗಿ ಆಗ್ರಹಿಸಿದ್ದರು ಎಂಬ ಆರೋಪ ಕುರಿತಂತೆ ಅವರು,ಎಲ್ಲ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುವದು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಶಫೀಕುಲ್ ಸಾವಿಗೆ ಸಂಬಂಧಿಸಿದಂತೆ ಬತಾದ್ರಬಾ ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ಡಿಜಿಪಿ ಭಾಸ್ಕರ ಜ್ಯೋತಿ ಮಹಂತ ರವಿವಾರ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News