ಉಡುಪಿ: ಕಾರಿನೊಳಗೆ ಬೆಂಕಿ ಹಚ್ಚಿ ಬೆಂಗಳೂರಿನ ಯುವ ಜೋಡಿ ಆತ್ಮಹತ್ಯೆ

Update: 2022-05-22 15:30 GMT

ಉಡುಪಿ, ಮೇ 22: ಬೆಂಗಳೂರಿನ ಯುವ ಜೋಡಿಯೊಂದು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 22ರಂದು ಬೆಳಗಿನ ಜಾವ 3ಗಂಟೆಯ ಸುಮಾರಿಗೆ ಹೆಗ್ಗುಂಜೆ ಗ್ರಾಮದ ಕೊತ್ತೂರು ಮಕ್ಕಿಮನೆ ಎಂಬಲ್ಲಿ ನಡೆದಿದೆ.

ಮೃತರನ್ನು ಬೆಂಗಳೂರು ಹೆಬ್ಬಾಳದ ಯಶವಂತ್ ಯಾದವ್ (24) ಹಾಗೂ ಜ್ಯೋತಿ(22) ಎಂದು ಗುರುತಿಸಲಾಗಿದೆ.

ಕಂಪ್ಯೂಟರ್ ಕ್ಲಾಸ್‌ನಲ್ಲಿ ಪರಿಚಯವಾದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಮನೆಯವ ವಿರೋಧ ಇತ್ತೆನ್ನಲಾಗಿದೆ. ಇದೇ ಕಾರಣಕ್ಕೆ ಇವರಿಬ್ಬರು ಮೇ 18ರಂದು ಮನೆ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮೇ 19 ಮತ್ತು ಮೇ 21ರಂದು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು.

ಮೇ 21ರಂದು ಮಂಗಳೂರಿಗೆ ಬಂದ ಇವರಿಬ್ಬರು, ಅಲ್ಲಿ ರೆಂಟ್ ಕಾರನ್ನು ಪಡೆದುಕೊಂಡು ಭಟ್ಕಳ ಸೇರಿದಂತೆ ಹಲವು ಕಡೆ ತಿರುಗಿ ಬಂದಿದ್ದರು. ವಾಪಾಸ್ಸು ಬರುವಾಗ ಮೇ 22ರಂದು ನಸುಕಿನ ವೇಳೆ ಮಂದಾರ್ತಿ ಕಡೆ ಹೋಗಿದ್ದರು. ಅಲ್ಲಿ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ, ಕಾರನ್ನು ಸಂಪೂರ್ಣ ಲಾಕ್ ಮಾಡಿ, ಒಳಗಡೆ ಪೆಟ್ರೋಲ್‌ನ್ನು ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆಂದು ತಿಳಿದುಬಂದಿದೆ.

ಇದರಿಂದ ಕಾರಿನೊಳಗೆ ಇದ್ದ ಇವರಿಬ್ಬರು ಸುಟ್ಟು ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದೆ. ಬೆಂಗಳೂರಿನಿಂದ ನಾಪತ್ತೆಯಾದ ಬಳಿಕ ಇವರಿಬ್ಬರು ಮದುವೆಯಾಗಿರಬೇಕೆಂದು ಶಂಕಿಸಲಾಗಿದೆ. ಕಾರಿನ ಮಾಲಕ ಕಾರನ್ನು ರೆಂಟ್ ನೀಡುವಾಗ ಜ್ಯೋತಿ ಕತ್ತಿನಲ್ಲಿ ತಾಳಿ ನೋಡಿದ್ದರು ಎನ್ನಲಾಗಿದೆ. ಅಲ್ಲದೆ ಜ್ಯೋತಿ ತನ್ನ ಅಣ್ಣನ ಮೊಬೈಲ್‌ಗೆ ತಾವಿಬ್ಬರು ಮದುವೆಯಾಗಿರುವುದಾಗಿ ಫೋಟೋ ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಯುವ ಮುನ್ನ ಯಶವಂತ್, ‘ನಾವು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ’ ಎಂದು ತನ್ನ ತಮ್ಮನಿಗೆ ಮೊಬೈಲ್ ಸಂದೇಶ ಕಳುಹಿಸಿದ್ದನು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಡಿವೈಎಸ್ಪಿ ಸುಧಾಕರ್ ನಾಯ್ಕ್, ವೃತ್ತ ನಿರೀಕ್ಷಕ ಅನಂತಪದ್ಮನಾಭ ಮೊದಲಾದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರು ಹೆಬ್ಬಾಳದಿಂದ ಉಡುಪಿಗೆ ಆಗಮಿಸಿದ್ದಾರೆ. 

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News