ಕುತುಬ್ ಮಿನಾರ್ ಸಂಕೀರ್ಣ ಉತ್ಖನನ ನಡೆಸುವ ಸುದ್ದಿಯ ಕುರಿತು ಕೇಂದ್ರ ಸರಕಾರ ಹೇಳಿದ್ದೇನು?

Update: 2022-05-22 17:44 GMT

ಹೊಸದಿಲ್ಲಿ,ಮೇ 22: ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್ಐ) ಇಲಾಖೆಯಿಂದ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ಕುರಿತು ಎಲ್ಲ ವದಂತಿಗಳನ್ನು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ಕಿಶನ್ ರೆಡ್ಡಿ ಅವರು ರವಿವಾರ ತಳ್ಳಿಹಾಕಿದರು.ಅಂತಹ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ರೆಡ್ಡಿ ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದರು.

ನೈರುತ್ಯ ದಿಲ್ಲಿಯ ಮೆಹ್ರೌಲಿಯಲ್ಲಿರುವ ಕುತುಬ್ ಮಿನಾರ್ ಸಂಕೀರ್ಣದಲ್ಲಿಯ 27 ಹಿಂದು ಮತ್ತು ಜೈನ ದೇವಸ್ಥಾನಗಳ ಜೀರ್ಣೋದ್ಧಾರವನ್ನು ಕೋರಿ ಜೈನ ತೀರ್ಥಂಕರ ವೃಷಭದೇವ ಮತ್ತು ಶ್ರೀವಿಷ್ಣು ಪರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಹೊರಬಿದ್ದಿದೆ.
"ಆಕ್ರಮಣಕೋರ ಮುಹಮ್ಮದ್ ಘೋರಿಯ ದಂಡನಾಯಕ,ಗುಲಾಮ ರಾಜವಂಶವನ್ನು ಸ್ಥಾಪಿಸಿದ್ದ ಮತ್ತು ದೇವಸ್ಥಾನಗಳಿದ್ದ ಜಾಗದಲ್ಲಿ ಕುವ್ವತ್-ಅಲ್-ಇಸ್ಲಾಮ್ ಮಸೀದಿಯನು ನಿರ್ಮಿಸಿದ್ದ ಕುತ್ಬುದ್ದೀನ್ ಐಬಕ್ ನ ಆದೇಶಗಳ ಮೇರೆಗೆ 27 ಹಿಂದು ಮತ್ತು ಜೈನ ದೇವಸ್ಥಾನಗಳಲ್ಲಿಯ ವಿಗ್ರಹಗಳನ್ನು ಕೆಡವಲಾಗಿತ್ತು, ಅಪವಿತ್ರಗೊಳಿಸಲಾಗಿತ್ತು ಮತ್ತು ಹಾನಿಯನ್ನು ಮಾಡಲಾಗಿತ್ತು. ಈ ವಿಗ್ರಹಗಳೊಂದಿಗೆ 27 ಹಿಂದು ಮತ್ತು ಜೈನ ದೇವಾಲಯಗಳನ್ನು ಮರುಸ್ಥಾಪಿಸುವ ಮೂಲಕ ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆಗಾಗಿ ಹಾಗೂ ಸಂವಿಧಾನದ 25 ಮತ್ತು 26ನೇ ವಿಧಿಗಳಡಿ ಖಾತರಿ ಪಡಿಸಲಾಗಿರುವ ಧಾರ್ಮಿಕ ಹಕ್ಕನ್ನು ಚಲಾಯಿಸಲು ಈ ದಾವೆಯನ್ನು ಹೂಡಲಾಗಿದೆ ಎಂದು" ಅರ್ಜಿಯಲ್ಲಿ ತಿಳಿಸಲಾಗಿದೆ.

ಎಎಸ್ಐ ಪ್ರಕಾರ 27 ಹಿಂದು ಮತ್ತು ಜೈನ ದೇವಸ್ಥಾನಗಳನ್ನು ನೆಲಸಮಗೊಳಿಸಿ ಅವುಗಳ ಸಾಮಗ್ರಿಗಳನ್ನು ಮರುಬಳಸಿ ಸಂಕೀರ್ಣದಲ್ಲಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದು ತಿಳಿಸಿರುವ ಅರ್ಜಿಯು, ಧ್ವಂಸಗೊಳಿಸಲಾಗಿದ್ದ ದೇವಸ್ಥಾನಗಳನ್ನು ಮರುಸ್ಥಾಪಿಸುವಂತೆ ಕೋರಿದೆ.
ಕವ್ವತುಲ್ ಮಸೀದಿ ಸಂಕೀರ್ಣದ ನಿವೇಶನದಲ್ಲಿ ದೇವಸ್ಥಾನ ಸಂಕೀರ್ಣವನ್ನು ಪುನರ್ನಿರ್ಮಿಸಿದ ಬಳಿಕ ಅದೇ ಗೌರವ ಮತ್ತು ಘನತೆಯೊಂದಿಗೆ ಮರುಸ್ಥಾಪನೆಗೊಳ್ಳುವ ಹಕ್ಕನ್ನು ಶ್ರೀವಿಷ್ಣು,ಶ್ರೀಗಣೇಶ, ಸೂರ್ಯ,ಗೌರಿ ದೇವಿ,ಹನುಮಾನ್,ಜೈನ ತೀರ್ಥಂಕರ ವೃಷಭ ದೇವ್ ಹೊಂದಿದ್ದಾರೆ ಎಂದು ಘೋಷಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News