ಕ್ಷಿಪ್ರವಾಗಿ ಪ್ಲಾಸ್ಟಿಕ್ ನಾಶಮಾಡುವ ಹೊಸ ಕಿಣ್ವವವನ್ನು ಸಂಶೋಧಿಸಿದ ಜರ್ಮನ್‌ ವಿಜ್ಞಾನಿಗಳು

Update: 2022-05-22 18:42 GMT
PHOTO:AFP

ಬರ್ಲಿನ್, ಮೇ 22: ಪ್ಲಾಸ್ಟಿಕ್ ಅನ್ನು 16 ಗಂಟೆಗೂ ಕಡಿಮೆ ಅವಧಿಯಲ್ಲಿ ನಾಶಮಾಡುವ ಹೊಸ ಕಿಣ್ವವನ್ನು ಜರ್ಮನಿಯ ವಿಜ್ಞಾನಿಗಳು ಸಂಶೋಧಿಸಿದ್ದಾರೆ.

  ಪಿಎಚ್ಎಲ್7 ಎಂದು ಹೆಸರಿಸಲಾದ ಈ ಕಿಣ್ವ 2016ರಲ್ಲಿ ಜಪಾನ್‌ನಲ್ಲಿ ಸಂಶೋಧಿಸಿದ ಎಲ್ಎಲ್ಸಿ ಕಿಣ್ವಕ್ಕಿಂತ ಕನಿಷ್ಟ 2 ಪಟ್ಟು ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ, ಪ್ಲಾಸ್ಟಿಕ್‌ಗಳು ಸಹಜವಾಗಿ ನಾಶವಾಗಲು ನೂರಾರು ವರ್ಷಗಳು ಬೇಕಾಗುತ್ತದೆ. ಆದರೆ, ಜರ್ಮನಿಯ ವಿಜ್ಞಾನಿಗಳು ದಾಖಲೆಯ ಕನಿಷ್ಟ ಅವಧಿಯಲ್ಲಿ ಪ್ಲಾಸ್ಟಿಕ್ ಅನ್ನು ನಾಶಗೊಳಿಸುವ ಕಿಣ್ವವನ್ನು ಅಭಿವೃದ್ಧಿಗೊಳಿಸಿದ್ದಾರೆ. ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆ ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಜರ್ಮನಿಯ ವಿಜ್ಞಾನಿಗಳ ಸಾಧನೆ ಅತ್ಯಂತ ನಿರ್ಣಾಯಕವಾಗಿದೆ. 

ಪಾಲಿಸ್ಟರ್ ಹೈಡ್ರೊಲೇಸ್ ಎಂದು ಹೆಸರಿಸಲಾದ ಈ ಕಿಣ್ವವು ಇತ್ತೀಚೆಗೆ ಜರ್ಮನಿಯ ಸ್ಮಶಾನವೊಂದರಲ್ಲಿ ಗೊಬ್ಬರವನ್ನು ಜಗಿಯುತ್ತಿರುವುದನ್ನು ಪತ್ತೆಹಚ್ಚಿದ ಲೀಪ್‌ಝಿಗ್ ವಿವಿಯ ವಿಜ್ಞಾನಿಗಳು ಅದನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದರು. ಅಲ್ಲಿ ನಡೆಸಿದ ಪ್ರಯೋಗದಲ್ಲಿ ಈ ಕಿಣ್ವವು ಪ್ಲಾಸ್ಟಿಕ್ ಅನ್ನು 16 ಗಂಟೆಗೂ ಕಡಿಮೆ ಅವಧಿಯಲ್ಲಿ ನಾಶ ಪಡಿಸುವುದು ದೃಢಪಟ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವಿಜ್ಞಾನಿಗಳ ಸಂಶೋಧನಾ ವರದಿ 'ಚೆಮ್‌ಸುಸ್‌ಚೆಮ್' ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಪಿಎಚ್ಎಲ್7 ಕಿಣ್ವವು ಪರ್ಯಾಯ ಶಕ್ತಿ ಉಳಿಸುವ ಪ್ಲಾಸ್ಟಿಕ್ ಮರುಬಳಕೆಯ ಪ್ರಕ್ರಿಯೆಗಳನ್ನು ಸ್ಥಾಪಿಸಲು ಪ್ರಮುಖ ಕೊಡುಗೆ ನೀಡುತ್ತದೆ ಎಂದು ಲೀಪ್‌ಝಿಗ್ ವಿವಿಯ ವಿಜ್ಞಾನಿ ವೋಲ್ಫ್‌ಗ್ಯಾಂಗ್ ಝಿಮರ್‌ಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News