ಪಶ್ಚಿಮಬಂಗಾಳದಲ್ಲಿ ಪಕ್ಷವು ಆಂತರಿಕ ಆತ್ಮಾವಲೋಕನ ಮಾಡಬೇಕು: ಬಿಜೆಪಿ ಮುಖಂಡ ಅನುಪಮ್ ಹಝ್ರಾ ಕರೆ
ಕೋಲ್ಕತಾ: ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕರು ಪಕ್ಷವನ್ನು ತೊರೆಯುತ್ತಿರುವುದರಿಂದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನುಪಮ್ ಹಝ್ರಾ ಅವರು ಆಂತರಿಕ ಆತ್ಮಾವಲೋಕನಕ್ಕೆ ಕರೆ ನೀಡಿದರು.
ರವಿವಾರ ಪ್ರಭಾವಿ ನಾಯಕ, ಹಾಲಿ ಸಂಸದ ಅರ್ಜುನ್ ಸಿಂಗ್ ಅವರು ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದರು.
“ಪಕ್ಷವು ಆಂತರಿಕವಾಗಿ ಪರಿಸ್ಥಿತಿಯನ್ನು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ’’ ಎಂದು ಮಾಜಿ ಸಂಸದ ಅನುಪಮ್ ಹಝ್ರಾ ಹೇಳಿದ್ದಾರೆ.
ಅರ್ಜುನ್ ಸಿಂಗ್ ಅವರ ನಿರ್ಗಮನವು ಪಕ್ಷಕ್ಕೆ ಮುಖ್ಯ ವಿಚಾರವಲ್ಲ ಎಂದು ಹೇಳಿಕೊಂಡ ಬಿಜೆಪಿ ನಾಯಕರನ್ನು 2019 ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಟಿಎಂಸಿ ಸಂಸದ ಹಝ್ರಾ ಸಾಮಾಜಿಕ ಮಾಧ್ಯಮದಲ್ಲಿ ತರಾಟೆಗೆ ತೆಗೆದುಕೊಂಡರು.
"ಇದು ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುವುದು ತಪ್ಪು. ಇದು ಒಬ್ಬರ ಆತ್ಮವನ್ನು ತೃಪ್ತಿಪಡಿಸುವ ಒಂದು ಮಾರ್ಗವಾಗಿದೆ. ನಾಯಕರು ಏಕೆ ಪಕ್ಷ ಬಿಟ್ಟು ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಹಝ್ರಾ ಬರೆದಿದ್ದಾರೆ.
ಹಝ್ರಾ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಜಾದವ್‌ಪುರ ಕ್ಷೇತ್ರದಲ್ಲಿ ಟಿಎಂಸಿಯ ಸ್ಟಾರ್ ಅಭ್ಯರ್ಥಿ ಮಿಮಿ ಚಕ್ರವರ್ತಿ ವಿರುದ್ಧ ಸೋತಿದ್ದರು.