ವಿಸ್ಮಯಾ ವರದಕ್ಷಿಣೆ ಕಿರುಕುಳ ಸಾವು ಪ್ರಕರಣ: ಪತಿಯನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ

Update: 2022-05-23 09:14 GMT
 Facebook/Vismaya V Nair

ಕೊಚ್ಚಿ: ಕೇರಳದಾದ್ಯಂತ ವದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಕೇರಳ ಮಾತ್ರವಲ್ಲದೇ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜೂನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾ ವಿ ನಾಯರ್ ರ ಪತಿಯನ್ನು ಕೇರಳದ ನ್ಯಾಯಾಲಯವು ವರದಕ್ಷಿಣೆ ಕಿರುಕುಳ ಸಾವಿನ ಪ್ರಕರಣದಲ್ಲಿ ಅಪರಾಧಿ ಎಂದು ಸೋಮವಾರ ತೀರ್ಪು ನೀಡಿದೆ ಎಂದು ತಿಳಿದು ಬಂದಿದೆ.

ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಜಿತ್ ಕೆಎನ್ ರವರು, ಮೃತ ಯುವತಿಯ ಪತಿ ಎಸ್ ಕಿರಣ್ ಕುಮಾರ್ ನನ್ನು ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 498-ಎ (ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತಹ ಸ್ವಭಾವದ ಯಾವುದೇ ಉದ್ದೇಶಪೂರ್ವಕ ನಡವಳಿಕೆ) ಮತ್ತು ಭಾರತೀಯ ದಂಡ ಸಂಹಿತೆಯ 304-ಬಿ (ವರದಕ್ಷಿಣೆ ಸಾವು) ಪ್ರಕರಣಗಳಡಿಯಲ್ಲಿ ಅಪರಾಧಿ ಎಂದು ಘೋಷಿಸಿದ್ದಾರೆ.

ಶಿಕ್ಷೆಯ ಪ್ರಮಾಣವನ್ನು ಮಂಗಳವಾರ ಪ್ರಕಟಿಸಲಾಗುವುದು. ಮೇ 17ರಂದು ಪ್ರಕರಣದ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತ್ತು. ಸೋಮವಾರ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ ಮೋಹನರಾಜ್ ಅವರು ಅಪರಾಧಿ ಕುಮಾರ್‌ಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಪ್ರಾಸಿಕ್ಯೂಷನ್ ಕೋರುತ್ತದೆ ಎಂದು ಹೇಳಿದರು. ವಿಸ್ಮಯಾ ಅವರ ತಂದೆ ತ್ರಿವಿಕ್ರಮನ್ ನಾಯರ್ ತಮ್ಮ ಮಗಳಿಗೆ ನ್ಯಾಯ ಸಿಕ್ಕಿದೆ ಎಂದು ನ್ಯಾಯಾಲಯದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು. ಪ್ರಾಸಿಕ್ಯೂಷನ್ ಮತ್ತು ತನಿಖಾ ತಂಡದ ಪ್ರಯತ್ನಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ ಎಂದು ಅವರು ಹೇಳಿದ್ದಾಗಿ PTI ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News