"ಬಿಡುಗಡೆಯಾದ ಬಳಿಕ ಎನ್‌ಕೌಂಟರ್‌ ಆಗಬಹುದು ಎಂದು ಇನ್ಸ್‌ಪೆಕ್ಟರ್‌ ಬೆದರಿಸಿದ್ದಾರೆ": ಎಸ್ಪಿ ಶಾಸಕ ಅಝಂ ಖಾನ್ ಆರೋಪ

Update: 2022-05-23 12:25 GMT

ಲಕ್ನೋ: ಜೈಲಿನಿಂದ ಬಿಡುಗಡೆಯಾದ ಬಳಿಕ ಎನ್‌ಕೌಂಟರ್‌ ಆಗಬಹುದು ಎಂದು ಜೈಲಿನಲ್ಲಿದ್ದ ವೇಳೆ ಇನ್ಸ್‌ಪೆಕ್ಟರ್‌ ತನಗೆ ಎಚ್ಚರಿಸಿದ್ದಾರೆಂದು ಸಮಾಜವಾದಿ ಪಕ್ಷದ ನಾಯಕ ಅಝಮ್‌ ಖಾನ್‌ ಆರೋಪಿಸಿದ್ದಾರೆ. ಭೂಕಬಳಿಕೆ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದ ಅಝಮ್‌ ಖಾನ್‌ಗೆ ಸುಪ್ರೀಂ ಕೋಟ್‌ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ. 

ಉತ್ತರ ಪ್ರದೇಶದ ರಾಮ್‌ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ ಜೈಲಿನಿಂದ ಬಿಡುಗಡೆಯಾದ ಬಳಿಕ ಭೂಗತರಾಗಿ, ನಿಮ್ಮ ವಿರುದ್ಧ ಹಲವಾರು ಪ್ರಕರಣಗಳಿವೆ, ನೀವು ಎನ್‌ಕೌಂಟರ್ ಆಗಬಹುದು ಎಂದು ಜೈಲಿನಲ್ಲಿರುವಾಗ ಇನ್ಸ್‌ಪೆಕ್ಟರ್‌ ಎಚ್ಚರಿಸಿದ್ದಾರೆ. ಅಂತಹ ಅಪಾಯಗಳ ಹಿನ್ನೆಲೆಯಲ್ಲಿ ನನ್ನ ಪ್ರಯಾಣ ಏನೆಂದು ಹೇಳುವುದು ಕಷ್ಟ,” ಎಂದು ಹೇಳಿರುವುದಾಗಿ ANI ವರದಿ ಮಾಡಿದೆ. 

 ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದ ಅಝಮ್‌ ಖಾನ್‌,  ಶುಕ್ರವಾರ ಬೆಳಗ್ಗೆ ಸೀತಾಪುರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಒಂದು ದಿನದ ಮೊದಲು, ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಚಲಾಯಿಸುವ ಮೂಲಕ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ನೀಡಿದೆ. 

"ಅಝಮ್‌ ಖಾನ್ ಅವರ ವಿರುದ್ಧ 81 ಪ್ರಕರಣಗಳನ್ನು ದಾಖಲಾದ ಬಳಿಕ ಅವರು ಜೈಲಿನಲ್ಲಿದ್ದರು. ಎಲ್ಲಾ 81 ಪ್ರಕರಣಗಳಲ್ಲಿ ಜಾಮೀನು ಆದೇಶವನ್ನು ಪಡೆದ ನಂತರ, ಅಝಮ್ ಖಾನ್ ಇಂದು ಬೆಳಿಗ್ಗೆ ಬಿಡುಗಡೆಯಾದರು,” ಎಂದು ಸೀತಾಪುರ ಜಿಲ್ಲಾ ಜೈಲು ಅಧೀಕ್ಷಕ ಸುರೇಶ್ ಸಿಂಗ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News