ಜ್ಞಾನವಾಪಿ ಮಸೀದಿ ಪ್ರಕರಣ: ಹೊಸದಾಗಿ ವಿಚಾರಣೆ ಕುರಿತು ನಾಳೆ ಉತ್ತರಪ್ರದೇಶ ನ್ಯಾಯಾಲಯದಿಂದ ಆದೇಶ

Update: 2022-05-24 07:03 GMT

ವಾರಣಾಸಿ,ಮೇ 23: ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಪ್ರಕರಣವನ್ನು ವಹಿಸಿಕೊಂಡಿರುವ ವಾರಣಾಸಿಯ ಅತ್ಯಂತ ಹಿರಿಯ ನ್ಯಾಯಾಧೀಶರ ನ್ಯಾಯಾಲಯವು ಹೊಸದಾಗಿ ವಿಚಾರಣೆ ಆರಂಭಗೊಳ್ಳುವ ದಿನಾಂಕ ಮತ್ತು ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಮಂಗಳವಾರ ಆದೇಶಗಳನ್ನು ಹೊರಡಿಸಲಿದೆ.


ಹಿಂದು ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿ ತಾನು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮೊದಲು ನಡೆಯಬೇಕು ಎಂದು ಮಸೀದಿ ಆಡಳಿತ ಸಮಿತಿಯು ಬಯಸಿದೆ ಮತ್ತು ಈ ಮನವಿಯನ್ನು ಅಂಗೀಕರಿಸುವ ಬಗ್ಗೆ ನ್ಯಾಯಾಲಯವು ಮಂಗಳವಾರ ನಿರ್ಧರಿಸಲಿದೆ. ಶುಕ್ರವಾರ ಹೊರಡಿಸಲಾದ ತನ್ನ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ಸರ್ವೆ ಮತ್ತು ಅದಕ್ಕೆ ಕಾರಣವಾಗಿದ್ದ ಅರ್ಜಿ ಸ್ವೀಕಾರಾರ್ಹವೇ ಎನ್ನುವುದನ್ನು ಆದ್ಯತೆಯಲ್ಲಿ ನಿರ್ಧರಿಸುವಂತೆ ವಾರಣಾಸಿ ನ್ಯಾಯಾಲಯಕ್ಕೆ ಸೂಚಿಸಿತ್ತು.


ವಾರಣಾಸಿ ಜಿಲ್ಲಾ ನ್ಯಾಯಾಲಯವು ಸೋಮವಾರ ಅಪರಾಹ್ನ ಎರಡು ಗಂಟೆಯಿಂದ ಅರ್ಧ ಗಂಟೆ ಕಾಲ ವಿಚಾರಣೆಯನ್ನು ನಡೆಸಿತು. ‘ಅರ್ಜಿಯು ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ನಮ್ಮ ಅರ್ಜಿಯ ವಿಚಾರಣೆಯನ್ನು ಮೊದಲು ನಡೆಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ ಎಂದು ನಾನು ನ್ಯಾಯಾಲಯಕ್ಕೆ ತಿಳಿಸಿದ್ದೇನೆ. ನಮ್ಮ ಅರ್ಜಿಯನ್ನು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೂ ನಾನು ನ್ಯಾಯಾಲಯದಲ್ಲಿ ಓದಿ ಹೇಳಿದ್ದೇನೆ. ತನಗೆ ಹೆಚ್ಚಿನ ದಾಖಲೆಗಳು ಮತ್ತು ನಮ್ಮ ಅರ್ಜಿಗೆ ಆಕ್ಷೇಪಗಳನ್ನು ಸಲ್ಲಿಸಲು ಹೆಚ್ಚಿನ ಸಮಯಾವಕಾಶದ ಅಗತ್ಯವಿದೆ ಎಂದು ಎದುರಾಳಿ ಪರ ವಕೀಲರು ಹೇಳಿದರಾದರೂ ಸ್ವೀಕಾರಾರ್ಹತೆ ಕುರಿತು ಅರ್ಜಿಯನ್ನು ಮೊದಲು ನಿರ್ಧರಿಸಬೇಕು ಎಂದು ನಾನು ತಿಳಿಸಿದ್ದೇನೆ ’ಎಂದು ಮಸೀದಿ ಸಮಿತಿಯ ಪರ ವಕೀಲ ಅಭಯನಾಥ ಯಾದವ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.


ಕಳೆದ ವಾರ,ಜ್ಞಾನವಾಪಿ ಮಸೀದಿಯ ವೀಡಿಯೊ ಚಿತ್ರೀಕರಣವನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ಸಂದರ್ಭ ಸರ್ವೋಚ್ಚ ನ್ಯಾಯಾಲಯವು,‘ಇದೊಂದು ಸಂಕೀರ್ಣ ಮತ್ತು ಸೂಕ್ಷ್ಮ ವಿಷಯವಾಗಿದೆ. ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಬದಲು ಜಿಲ್ಲಾ ನ್ಯಾಯಾಧೀಶರು ದಾವೆಯ ವಿಚಾರಣೆಯನ್ನು ನಡೆಸಬೇಕು ಎಂದು ನಾವು ಭಾವಿಸಿದ್ದೇವೆ’ ಎಂದು ತನ್ನ ಆದೇಶದಲ್ಲಿ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News