ಪ್ರತಿಯೊಂದನ್ನೂ ಭಯೋತ್ಪಾದನೆಯೆಂದು ವ್ಯಾಖ್ಯಾನಿಸುವ ಬಲೆಗೆ ನ್ಯಾಯಾಲಯ ಸಿಲುಕಬಾರದು: ಉಮರ್ ಖಾಲಿದ್

Update: 2022-05-23 18:10 GMT
Photo: Facebook

ಹೊಸದಿಲ್ಲಿ,ಮೇ 23: ಈಶಾನ್ಯ ದಿಲ್ಲಿ ದಂಗೆಗಳ ಹಿಂದಿನ ವ್ಯಾಪಕ ಒಳಸಂಚಿನ ಪೊಲೀಸ್ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಅವರು,ನ್ಯಾಯಾಲಯವು ಪ್ರತಿಯೊಂದನ್ನೂ ಭಯೋತ್ಪಾದಕ ಚಟುವಟಿಕೆಯೆಂದು ವ್ಯಾಖ್ಯಾನಿಸುವ ಬಲೆಗೆ ಬೀಳಬಾರದು ಎಂದು ಸೋಮವಾರ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ವಾದಿಸಿದರು. ಇದಕ್ಕೂ ಮುನ್ನ ನ್ಯಾಯಾಲಯವು ಸಿಎಎ ವಿರುದ್ಧದ ಪ್ರತಿಭಟನೆಗಳು ಜನತೆಯಲ್ಲಿ ಭೀತಿ ಮತ್ತು ಅಭದ್ರತೆಯ ಭಾವನೆಯನ್ನು ಮೂಡಿಸಿದ್ದವೇ ಎಂದು ಪ್ರಾಸಿಕ್ಯೂಷನ್ ಅನ್ನು ಪ್ರಶ್ನಿಸಿತ್ತು.

ಜನತೆಯಲ್ಲಿ ಭೀತಿ ಮತ್ತು ಅಭದ್ರತೆಯ ಭಾವನೆಯನ್ನು ಮೂಡಿಸುವ ಚಟುವಟಿಕೆಯನ್ನು ಭಯೋತ್ಪಾದಕ ಕೃತ್ಯವೆಂದು ಕರೆಯಬಹುದಾಗಿದೆ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದ ಸಂದರ್ಭ ಖಾಲಿದ್ ಈ ನಿವೇದನೆಯನ್ನು ಮಾಡಿಕೊಂಡರು.
ನ್ಯಾಯಾಲಯವು ಖಾಲಿದ್ ಸಲ್ಲಿಸಿರುವ ಜಾಮೀನು ಅರ್ಜಿಯ ಮೇಲೆ ವಾದಗಳನ್ನು ಆಲಿಸುತ್ತಿತ್ತು.
 ‌ʼ
ವಿಚಾರಣಾ ನ್ಯಾಯಾಲಯವು ತನ್ನ ಕಕ್ಷಿದಾರರಿಗೆ ಜಾಮೀನು ನಿರಾಕರಿಸಿರುವ ಆದೇಶದಲ್ಲಿ ‘ಛಕ್ಕಾ ಜಾಮ್ (ವಾಹನಗಳ ಸಂಚಾರಕ್ಕೆ ತಡೆ)’ ಪ್ರತಿಭಟನೆಯನ್ನು ಯಾವುದೇ ಆಧಾರವಿಲ್ಲದೆ ಭಯೋತ್ಪಾದಕ ಕೃತ್ಯದ ಮಟ್ಟಕ್ಕೆ ಹೆಚ್ಚಿಸಿದೆ ಮತ್ತು ಯಾವುದೇ ಚರ್ಚೆಯಿಲ್ಲದೆ ಕೇವಲ ಸಾಕ್ಷಿಗಳ ಹೇಳಿಕೆಯನ್ನು ಪುನರುಚ್ಚರಿಸಿದೆ ಎಂದು ಖಾಲಿದ್ ಪರ ಹಿರಿಯ ವಕೀಲ ತ್ರಿದೀಪ ಪಾಯಸ್ ವಾದಿಸಿದರು.
 
ಪ್ರತಿಭಟನೆಗಳು ‘ಅನ್ಯಾಯದ ಕಾನೂನಿನ ’ವಿರುದ್ಧವಾಗಿದ್ದವು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯ ಕಲಂ 15ರಲ್ಲಿ ಹೇಳಿರುವಂತೆ ಹಿಂಸಾಚಾರವನ್ನು ಗುರಿಯಾಗಿಸಿಕೊಂಡಿರಲಿಲ್ಲ ಅಥವಾ ನಡೆಸುತ್ತಿರಲಿಲ್ಲ ಎಂದು ಪಾಯಸ್ ವಾದಿಸಿದರು. ಕಲಂ 15 ಭಯೋತ್ಪಾದನೆಯನ್ನು ವ್ಯಾಖ್ಯಾನಿಸುತ್ತಿದ್ದು,ಇದರಡಿ ಖಾಲಿದ್ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.

ತನ್ನ ಕಕ್ಷಿದಾರರ ವಿರುದ್ಧ ಉಲ್ಲೇಖಿಸಲಾಗಿರುವ ಹಲವಾರು ಕೃತ್ಯಗಳು ಮತ್ತು ನಿದರ್ಶನಗಳು ಭಯೋತ್ಪಾದನೆ ಎಂದು ಬಣ್ಣಿಸಲೂ ಅನರ್ಹವಾಗಿವೆ. ಅವು ಕೇವಲ ಪ್ರತಿಭಟನೆಗಳು ಅಥವಾ ಸಭೆಗಳಾಗಿದ್ದವು. ತನ್ನ ಕಕ್ಷಿದಾರರು ಯಾವುದೇ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ,ಅವರು ಭಾಗಿಯಾಗಿದ್ದರು ಎನ್ನವುದಕ್ಕೆ ಯಾವುದೇ ಸಾಕ್ಷಾಧಾರಗಳೂ ಇಲ್ಲ ಎಂದು ಪಾಯಸ್ ಬೆಟ್ಟು ಮಾಡಿದರು.
ವಿಚಾರಣೆಯು ಮಂಗಳವಾರ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News