ಬಂಗಾಳದ ರಾಜಕೀಯದಲ್ಲಿ ಬಾಂಬ್‌ ತಯಾರಿಸುವುದು ಸಾಮಾನ್ಯ: ಬಿಜೆಪಿ ನಾಯಕ ದಿಲೀಪ್‌ ಘೋಷ್

Update: 2022-05-23 12:49 GMT
Photo: Twitter

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಪಕ್ಷದ ನಾಯಕರ ಕುರಿತು ಪ್ರತಿಕ್ರಿಯಿಸುವ ವೇಳೆ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಅವರು ಇಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ರಾಜಕೀಯ ಹಿಂಸಾಚಾರವನ್ನು ಸಹಜವೆಂಬಂತೆ ನೋಡುತ್ತಿರುವುದಾಗಿ ತೋರುತ್ತಿದೆ. "ಬಂಗಾಳ ರಾಜಕೀಯದಲ್ಲಿ ಬಾಂಬ್ ತಯಾರಿಸುವುದು ಸಹಜ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಉಪಾಧ್ಯಕ್ಷ ಮತ್ತು ಸಂಸದ, ಅರ್ಜುನ್ ಸಿಂಗ್ ಅವರು ರವಿವಾರ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಮರಳಿದ್ದರು. 2019 ರಲ್ಲಿ ಅವರು ಪಕ್ಷ ತೊರೆದಿದ್ದರು.

‘ತತ್ವಗಳ ಆಧಾರದ ಮೇಲೆ ರಾಜಕೀಯ ಮಾಡದವರು ಬಿಜೆಪಿಯಲ್ಲಿ ಉಳಿಯುವುದು ಕಷ್ಟ’ ಎಂದು ದಿಲೀಪ್ ಘೋಷ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ "ಅರ್ಜುನ್ ಸಿಂಗ್ ಬಾಂಬ್ ತಯಾರಿಸುತ್ತಾರೆ" ಎಂಬ ಅವರದೇ ಆರೋಪವನ್ನು ನೆನಪಿಸಿದ ಪತ್ರಕರ್ತರು, ಅದು ನಿಜವಾಗಿದ್ದರೆ ಅವರನ್ನು ಬಿಜೆಪಿಗೆ ಏಕೆ ಬರಮಾಡಿಕೊಂಡಿತು? ಎಂದು ಪ್ರಶ್ನಿಸಿದರು. "ನಾವು ಬಹಳಷ್ಟು ಜನರನ್ನು ಸೇರಿಸಿಕೊಂಡಿದ್ದೇವೆ. ರಾಜಕೀಯದಲ್ಲಿ ಬಾಂಬ್ ತಯಾರಿಸುವುದು ಬಂಗಾಳದಲ್ಲಿ ಸಾಮಾನ್ಯ ಸಂಗತಿಯಾಗಿದೆ" ಎಂದು ಖರಗ್‌ಪುರದ ಬಿಜೆಪಿ ಸಂಸದ ಘೋಷ್ ಹೇಳಿದ್ದಾರೆ.

"ತೃಣಮೂಲದಿಂದ ಯಾರೇ ಬಂದರೂ ಹೀಗೇ ಇರುತ್ತಾರೆ, ಅದನ್ನು ಎದುರಿಸಲು ಕಾನೂನು ಇದೆ. ಅವರು ಇರುವ ಜಾಗದಲ್ಲಿ ಒಂದೋ ತೊಂದರೆ ಸೃಷ್ಟಿಸುತ್ತಾರೆ ಅಥವಾ ಇತರರು ಅವರನ್ನು ಗುರಿಯಾಗಿಸಲು ತೊಂದರೆ ಸೃಷ್ಟಿಸುತ್ತಾರೆ, ಬಿಜೆಪಿಗೆ ಬಂದಾಗ ಅವರ ವಿರುದ್ಧ ಕಿರುಕುಳ ನಡೆಸಲಾಗಿತ್ತು. ಇದನ್ನು ನಾವು ನೋಡಿದ್ದೇವೆ. ನಾನು ಸಂಸತ್ತಿನಲ್ಲೂ ಅವರು ನೀಡಿದ ದೂರುಗಳ ಬಗ್ಗೆ ಮಾತನಾಡಿದ್ದೇನೆ. ಅವರಿಗೆ ಹೊಂದಾಣಿಕೆ ಮಾಡಲು ಸಾಧ್ಯವಾಗಲಿಲ್ಲ, ಅದು ಅವರ ಸಮಸ್ಯೆ, ”ಎಂದು ಬಿಜೆಪಿ ನಾಯಕ ಹೇಳಿದರು.

ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ರಾಜಕೀಯ ಕಾರ್ಯಕರ್ತರು ಬಳಸುವ ನಾಡ ಬಾಂಬ್‌ಗಳೊಂದಿಗೆ ಬಂಗಾಳವು ವರ್ಷಗಳಿಂದ ಹಿಂಸಾತ್ಮಕ ರಾಜಕೀಯವನ್ನು ಅನುಭವಿಸುತ್ತಾ ಬಂದಿದೆ. 2021ರ ಬಂಗಾಳ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಇದನ್ನು ದೊಡ್ಡ ಪ್ರಚಾರ ವಿಷಯವನ್ನಾಗಿ ಮಾಡಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News