×
Ad

ಬೆಂಗಳೂರಿನ ಯುವ ಜೋಡಿ ಆತ್ಮಹತ್ಯೆ ಪ್ರಕರಣ: ಕೊಲೆ ಆಯಾಮದಲ್ಲೂ ತನಿಖೆ; ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ

Update: 2022-05-23 21:48 IST

ಉಡುಪಿ, ಮೇ 23: ಹೆಗ್ಗುಂಜೆ ಗ್ರಾಮದ ಕೊತ್ತೂರು ಮಕ್ಕಿಮನೆ ಎಂಬಲ್ಲಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಬೆಂಗಳೂರಿನ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಕೊಲೆ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

ಮೃತ ಬೆಂಗಳೂರು ಹೆಬ್ಬಾಳದ ಯಶವಂತ್ ಯಾದವ್(24) ಹಾಗೂ ಜ್ಯೋತಿ(22) ಅವರ ಕುಟುಂಬಸ್ಥರು ರಾತ್ರಿ ಉಡುಪಿಗೆ ತಲುಪಿದ್ದು, ಬಳಿಕ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಡೆಸಲಾಯಿತು. ಸೋಮವಾರ ನಸುಕಿನ ವೇಳೆ ಇಂದ್ರಾಳಿಯ ಚಿತಾಗಾರದಲ್ಲಿ ಇಬ್ಬರ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದರು.

'ಮೊಬೈಲ್ ಸಂದೇಶ ಪರಿಶೀಲನೆ'

ಈ ಬಗ್ಗೆ ಮಾತನಾಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ, ಈ ಪ್ರಕರಣದ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಆದರೂ ಪ್ರಕರಣವನ್ನು ಕೊಲೆ ಎಂಬ ಆಯಾಮದಲ್ಲೂ ತನಿಖೆ ಮಾಡಲಾಗುವುದು. ಮೇಲ್ನೋಟಕ್ಕೆ ಅಸಹಜ ಸಾವಿನಂತೆ ಕಂಡುಬರುತ್ತಿದೆ. ಕೊಲೆ ನಡೆದಿರಬಹುದು ಎಂಬ ಆಯಾಮದಲ್ಲೂ ತನಿಖೆ ಮಾಡುತ್ತೇವೆ ಎಂದರು.

ಯಶವಂತ್ ಯಾದವ ಅವರೇ ಮೊಬೈಲ್ ಸಂದೇಶ ಕಳುಹಿಸಿದ್ದಾರೆಯೇ ಅಥವಾ ಬೇರೆ ಯಾರಾದರೂ ಮಾಡಿರಬಹುದೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಇಬ್ಬರು ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ರಸ್ತೆಯ ಡೆಡ್ ಎಂಡ್‌ನಲ್ಲಿ ಕಾರು ಸುಡುತ್ತಿತ್ತು. ಸಾಮಾನ್ಯವಾಗಿ ಕಾರಿನ ಒಳಗೆ ಬೆಂಕಿ ಹಾಕಿಕೊಂಡು ಯಾರೂ ಆತ್ಮಹತ್ಯೆ ಮಾಡುವುದಿಲ್ಲ. ಹೀಗಾಗಿ ಹಲವು ಸಂಶಯಗಳು ಇರುವುದರಿಂದ ನಾವು ಆ ದಿಕ್ಕಿನಲ್ಲಿ ತನಿಖೆಯನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.

'ಎಸ್ಸಿ ಎಂಬ ಕಾರಣಕ್ಕೆ ವಿರೋಧ'

ಯಶವಂತ ಮತ್ತು ಜ್ಯೋತಿಗೆ ಮದುವೆ ಆಗಿರಲಿಲ್ಲ. ಮಂಗಳೂರಿನಲ್ಲಿ ಬಾಡಿಗೆ ಮನೆ ಮತ್ತು ಬಾಡಿಗೆ ಕಾರು ಪಡೆದುಕೊಳ್ಳುವಾಗ ತಾವಿಬ್ಬರು ಗಂಡ- ಹೆಂಡತಿ ಎಂದು ಹೇಳಿಕೊಂಡಿದ್ದಾರೆ. ಮುಂದಿನ ಜೀವನ ಭವಿಷ್ಯದ ದೃಷ್ಟಿಯಲ್ಲಿ ಧೈರ್ಯವನ್ನು ಕಳೆದುಕೊಂಡು ಹೀಗೆ ಮಾಡಿಕೊಂಡಿರಬಹುದು ಎಂದು ಹೆಚ್ಚುವರಿ ಎಸ್ಪಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News