×
Ad

ಬಿಜೆಪಿಗೆ ಜ್ಞಾನವಾಪಿ ಬಾಬರಿಯಿದ್ದಂತೆ: ಅದು ಚುನಾವಣೆಗಳಲ್ಲಿ ಲಾಭಕರ, ಆದರೆ ಭಾರತವನ್ನು ಕರಾಳ ಭೂತಕಾಲಕ್ಕೆ ಒಯ್ಯುತ್ತದೆ

Update: 2022-05-24 20:33 IST

ಈ ಸಮಯ ಭಿನ್ನವಾಗಿದೆ ಎಂದು ನನಗೆ ಮನವರಿಕೆ ಮಾಡಿದ್ದು ಬಿಜೆಪಿಯ ತೀವ್ರ ಪ್ರತಿಕ್ರಿಯೆ. ನಾನು ಹಿಂದೆಯೇ ಬರೆದಿದ್ದಂತೆ ಹಿಂದುತ್ವ ಬಲಪಂಥೀಯರು ಕೋಮು ಉದ್ವಿಗ್ನತೆ ತಣ್ಣಗಾಗದಿರುವಂತೆ ನೋಡಿಕೊಳ್ಳುವ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಹಿಂದು-ಮುಸ್ಲಿಮ್ ವಿವಾದಗಳನ್ನು ನಿರಂತರವಾಗಿ ಪ್ರಸ್ತಾಪಿಸಲಾಗುತ್ತಿದೆ-‘ವಾಸ್ತವದಲ್ಲಿ ಹಿಂದು ಅರಮನೆ’ಯಾಗಿದ್ದ ತಾಜ್ ಮಹಲ್‌ ನ ‘ರಹಸ್ಯ’ಕೋಣೆಗಳು, ದಿಲ್ಲಿಯ ಅಕ್ಬರ್ ಮತ್ತು ಹುಮಾಯನ್ ರಸ್ತೆಗಳಿಗೆ ಮರುನಾಮಕರಣದ ಬೇಡಿಕೆ, ಹಿಜಾಬ್ ವಿಷಯದಲ್ಲಿ ಶಾಲಾ ವಿದ್ಯಾರ್ಥಿನಿಯರನ್ನು ಗುರಿಯಾಗಿಟ್ಟುಕೊಂಡು ಗಲಾಟೆ ಇತ್ಯಾದಿಗಳು; ಏಕೆಂದರೆ ಸಾಮಾನ್ಯವಾಗಿ ಹಿಂದು ಭಾವನೆಗಳು ತೀವ್ರಗೊಂಡಾಗ ಬಿಜೆಪಿ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡುತ್ತದೆ. ಮೇಲಾಗಿ ಧಾರ್ಮಿಕ ವಿಷಯಗಳು ಇಂದಿನ ಭಾರತದ ವಾಸ್ತವತೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಉಪಯುಕ್ತ ಸಾಧನಗಳಾಗಿವೆ. ಹಣದುಬ್ಬರ,ಹೆಚ್ಚಿನ ಇಂಧನ ದರಗಳು, ನಮ್ಮ ಗಡಿಯೊಳಗೆ ಚೀನೀಯರ ಉಪಸ್ಥಿತಿ ಇತ್ಯಾದಿ.

ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿದೆ ಎನ್ನಲಾಗಿರುವ ʼಶಿವಲಿಂಗʼದ ಕುರಿತು ವಿವಾದವು ಇಂತಹ ಇನ್ನೊಂದು ಸಮಸ್ಯೆಯಷ್ಟೇ ಎಂದು ನಾನು ಆರಂಭದಲ್ಲಿ ಭಾವಿಸಿದ್ದೆ. ಬಿಜೆಪಿಯು ಇಂತಹ ವಿವಾದವನ್ನು ಚರ್ಚೆಯ ವಿಷಯವನ್ನಾಗಿ ಮಾಡುತ್ತದೆ ಮತ್ತು ಅದು ಕಾವು ಕಳೆದುಕೊಂಡ ಬಳಿಕ ವಿವಾದವನ್ನಾಗಿಸಲು ಹೊಸದೇನನ್ನಾದರೂ ಕಂಡುಕೊಳ್ಳುತ್ತದೆ.

ಆದರೆ ಈ ಸಲ ಜ್ಞಾನವಾಪಿ ಮಸೀದಿ ವಿವಾದ ಇಲ್ಲಿಯೇ ಉಳಿದುಕೊಳ್ಳುವಂತೆ ಕಾಣುತ್ತಿದೆ. ಮಸೀದಿಯಲ್ಲಿ ಇದೆ ಎನ್ನಲಾಗಿರುವ ಶಿವಲಿಂಗವು ಲಿಂಗಕ್ಕಿಂತ ಹೆಚ್ಚಾಗಿ ಕಾರಂಜಿಯಂತೆ ಕಾಣುತ್ತಿರುವುದರಿಂದ ಶಿವಲಿಂಗ ಎಂದು ಬಣ್ಣಿಸಬಹುದಾದ ಇಂತಹುದೇ ಆಕಾರದ ವಸ್ತುಗಳ ಕುರಿತು ಜೋಕ್ ಗಳ ಮಹಾಪೂರವೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದುಬಂದಿದೆ. ಕೆಲವು ಜೋಕ್ ಗಳು ಸಾಕಷ್ಟು ನಿರುಪದ್ರವಿಯಾಗಿದ್ದರೆ ಇತರ ಜೋಕ್ ಗಳು ಪ್ರಶ್ನಾರ್ಹ ಅಭಿರುಚಿಯನ್ನು ಹೊಂದಿವೆ. ಆದರೆ ತಮಾಷೆ ಏನೇ ಇರಲಿ, ಬಿಜೆಪಿಯ ಐಟಿ ಘಟಕ ಮತ್ತು ಸಾಮಾಜಿಕ ಮಾಧ್ಯಮ ಜಗತ್ತಿನಲ್ಲಿಯ ಅದರ ಬದಲಿ ಶಕ್ತಿಗಳು ತೀವ್ರ ಪ್ರತಿದಾಳಿಗಳನ್ನು ನಡೆಸಿವೆ. 

ಇಂತಹ ತಮಾಷೆಗಳನ್ನು ಮಾಡಿದವರನ್ನು ನಿಂದಿಸಲಾಗಿದೆ, ಕಾನೂನು ಕ್ರಮದ ಬೆದರಿಕೆಯೊಡ್ಡಲಾಗಿದೆ ಮತ್ತು ಶಿವನ ಕೋಪಕ್ಕೆ ಗುರಿಯಾಗುವ ಎಚ್ಚರಿಕೆಯನ್ನು ನೀಡಲಾಗಿದೆ. ಇಷ್ಟಾದ ಬಳಿಕ ಕೇಂದ್ರದ ಕೈಗೊಂಬೆಯಾಗಿರುವ ದಿಲ್ಲಿ ಪೊಲೀಸರು ರಂಗಕ್ಕಿಳಿದು ಶಿವಲಿಂಗ ವಿವಾದದ ಕುರಿತು ಟ್ವೀಟಿಸಿದ್ದ ದಲಿತ ಹೋರಾಟಗಾರರೂ ಆಗಿರುವ ದಿಲ್ಲಿ ವಿವಿಯ ಪ್ರೊಫೆಸರ್ ರನ್ನು ಬಂಧಿಸಿದ್ದರು. ಮರುದಿನ ಪ್ರೊಫೆಸರ್ರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿದಾಗ ನ್ಯಾಯಪರ ನಿಲುವಿನ ನ್ಯಾಯಾಧೀಶರು ಅಲ್ಲಿದ್ದುದು ಅವರ ಅದೃಷ್ಟವಾಗಿತ್ತು. ಪ್ರೊಫೆಸರ್ ರನ್ನು 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕು ಎಂದು ದಿಲ್ಲಿ ಪೊಲೀಸರ ಪರ ವಕೀಲರು ಆಗ್ರಹಿಸಿದ್ದರಾದರೂ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ.

ಅಣಕದ ಕೋಪ, ಬಂಧನ, ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಸಿನ ಪ್ರಚಾರ; ಇವೆಲ್ಲವೂ ಒಂದು ವಿಷಯವನ್ನು ಮಾತ್ರ ಸೂಚಿಸುತ್ತಿವೆ... ಇದು ಕೇವಲ ಇನ್ನೊಂದು ಕುದಿಯುತ್ತಿರುವ ವಿವಾದವಲ್ಲ. ಬಿಜೆಪಿಯು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಮತ್ತು ಬಹುಶಃ 2024ರಲ್ಲಿ ನಡೆಯಲಿರುವ ಮುಂದಿನ ಲೋಕಸಭಾ ಚುನಾವಣೆಯವರೆಗೂ ಇದಕ್ಕೆ ಅಂಟಿಕೊಳ್ಳುತ್ತದೆ. 

ಬೆಂಕಿ ಆರಂಭಗೊಂಡಿದ್ದು ಹೇಗೆ?

1984ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು. ರಂಗಕ್ಕೆ ಮರಳಲು ವಿಷಯವೊಂದಕ್ಕೆ ಅದು ಹತಾಶ ಹುಡುಕಾಟ ನಡೆಸಿತ್ತು. 1986-87ರಲ್ಲಿ ಬಾಬ್ರಿ ಮಸೀದಿ ವಿವಾದವನ್ನು ಅದು ಕಂಡುಕೊಂಡಿತ್ತು. ಅದು ದಶಕಗಳಷ್ಟು ಹಳೆಯ ವಿವಾದವಾಗಿತ್ತು. ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯವರು ಈ ವಿವಾದವನ್ನು ಕೆದಕುವ ಮೂಲಕ ರಾಷ್ಟ್ರಮಟ್ಟದ ಸುದ್ದಿಯನ್ನಾಗಿಸಿದ್ದರು. ಅಲ್ಲಿಯವರೆಗೆ ಹೆಚ್ಚಿನವರಿಗೆ, ಅಷ್ಟೇ ಏಕೆ, ಉತ್ತರ ಪ್ರದೇಶದಲ್ಲಿಯ ಹೆಚ್ಚಿನ ಹಿಂದುಗಳಿಗೂ ಈ ವಿವಾದದ ಬಗ್ಗೆ ಗೊತ್ತಿರಲಿಲ್ಲ. ಆಡ್ವಾಣಿಯವರ ರಥಯಾತ್ರೆ, ಬಾಬ್ರಿ ಮಸೀದಿ ಧ್ವಂಸ ಇವೆಲ್ಲವೂ ವಿವಾದವನ್ನು ತೀವ್ರಗೊಳಿಸಿದ್ದವು ಮತ್ತು ಇದೇ ವಿವಾದವು ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿತ್ತು.

ಮಂದಿರ-ಮಸೀದಿ ವಿವಾದಗಳು ಅಂತ್ಯಗೊಳ್ಳುವುದಿಲ್ಲ

ಇಡೀ ರಾಮ ಜನ್ಮಭೂಮಿ-ಬಾಬರಿ ಮಸೀದಿ ಅಧ್ಯಾಯವು ನಮಗೆ ಬಹಳಷ್ಟನ್ನು ಕಲಿಸಿದೆ. ಸಮುದಾಯಗಳ ನಡುವೆ ದ್ವೇಷವಿದ್ದಾಗ ಯಾವುದೇ ಸರಕಾರವು ಮಾಡಬಹುದಾದ ಕೆಟ್ಟ ಕೆಲಸವೆಂದರೆ ಒಂದು ಸಮುದಾಯದ ಮೊಂಡುತನದ ನಿಲುವುಗಳನ್ನು ಆಕ್ರಮಣಕಾರಿಯಾಗಿ ಬೆಂಬಲಿಸುವುದು. ಇನ್ನೊಂದು,ರಾಜಕೀಯ ಜಾತ್ಯತೀತವಾದಿಗಳು ಐತಿಹಾಸಿಕ ಕುಂದುಕೊರತೆಗಳ ಹಿಂದು ಭಾವನೆಯನ್ನು ನಿಜಕ್ಕೂ ಅರ್ಥ ಮಾಡಿಕೊಂಡಿರಲಿಲ್ಲ.

 ಅಂತಿಮವಾಗಿ ಇಂದಿನ ರಾಜಕೀಯದ ಅಗತ್ಯಗಳಿಗೆ ತಕ್ಕಂತೆ ಇತಿಹಾಸವನ್ನು ನೀವು ಮರುರಚಿಸಲು ಸಾಧ್ಯವಿಲ್ಲ. ಮುಸ್ಲಿಮರು ಎಂದೂ ದೇವಸ್ಥಾನವನ್ನು ಧ್ವಂಸಗೊಳಿಸಲಿಲ್ಲ ಅಥವಾ ವಿಗ್ರಹವನ್ನು ಒಡೆಯಲಿಲ್ಲ ಎಂದು ನೀವು ಹೇಳುವಂತಿಲ್ಲ. ಸಾಕ್ಷಾಧಾರಗಳನ್ನು ಪರಿಶೀಲಿಸದೆ ಮಸೀದಿಯೊಂದು ದೇವಸ್ಥಾನದ ಜಾಗದಲ್ಲಿ ನಿರ್ಮಾಣಗೊಂಡಿದೆಯೇ ಇಲ್ಲವೇ ಎಂದು ನೀವು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದಾಗ್ಯೂ ಯಾವುದೇ ದೇವಸ್ಥಾನವನ್ನು ಧ್ವಂಸಗೊಳಿಸಿ ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದನ್ನು ನಿರಾಕರಿಸಲು ಜಾತ್ಯತೀತವಾದಿಗಳು ಬದ್ಧರಾಗಿದ್ದರು.

ದಿಲ್ಲಿಯಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಧ್ವಂಸಗೊಂಡಿದ್ದ ಬಾಬ್ರಿ ಮಸೀದಿ ಪ್ರಹಸನದ ನಂತರವೂ ಹೆಚ್ಚಿನ ಜಾತ್ಯತೀತವಾದಿಗಳು ಯಾವುದೇ ಪಾಠ ಕಲಿತಿದ್ದಾರೆಯೇ ಎನ್ನುವುದು ನನಗೆ ಖಚಿತವಿಲ್ಲ. ಬಾಬರಿ ಮಸೀದಿ ಇದ್ದ ನಿವೇಶನವನ್ನು ಈಗ ಮಂದಿರ ನಿರ್ಮಾಣಕ್ಕಾಗಿ ಹಿಂದುಗಳಿಗೆ ನೀಡಲಾಗಿದೆ.

ಬಾಬರಿ ಮಸೀದಿಯಿಂದ ಬಿಜೆಪಿಯೂ ಪಾಠವನ್ನು ಕಲಿತುಕೊಂಡಿದೆ. ದೇವಸ್ಥಾನವಿದ್ದ ಜಾಗದಲ್ಲಿ ನಿರ್ಮಿಸಿರಬಹುದಾದ ಯಾವುದೇ ಮಸೀದಿಯ ವಿಷಯವನ್ನು ತಾನು ಎತ್ತಿದರೆ ತಕ್ಷಣದ ಜಾತ್ಯತೀತವಾದಿ ಪ್ರತಿಕ್ರಿಯೆಗಳು ತನ್ನ ಹೇಳಿಕೆಯ ಐತಿಹಾಸಿಕತೆಯನ್ನು ನಿರಾಕರಿಸುತ್ತವೆ ಎನ್ನುವುದು ಬಿಜೆಪಿಗೆ ಚೆನ್ನಾಗಿ ಗೊತ್ತು. ಇಂತಹ ಕೆಲವು ಮಸೀದಿಗಳನ್ನು ಹಿಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿ ನಿರ್ಮಿಸಲಾಗಿದೆ ಎನ್ನುವುದು ಹೊರಹೊಮ್ಮಿದಾಗ ಅದು ಜಾತ್ಯತೀತವಾದಿಗಳು ಮುಸ್ಲಿಮರ ಬಗ್ಗೆ ಪಕ್ಷಪಾತವನ್ನು ಹೊಂದಿದ್ದಾರೆ ಎಂಬ ಆರೆಸ್ಸೆಸ್ ನ ಹಳೆಯ ಪ್ರತಿಪಾದನೆಯನ್ನು ಇನ್ನಷ್ಟು ಬಲಗೊಳಿಸುತ್ತದೆ.

ಇದೇ ಕಾರಣಕ್ಕೆ ಬಿಜೆಪಿ ಕಾಶಿ ಮತ್ತು ಮಥುರಾಗಳಲ್ಲಿಯ ಮಸೀದಿಗಳ ವಿಷಯವನ್ನು ಮತ್ತೆ ಎತ್ತುತ್ತಿದೆ. ಜಾತ್ಯತೀತವಾದಿಗಳು ಇಕ್ಕಟ್ಟಿಗೆ ಸಿಲುಕಬೇಕು ಎಂದು ಅದು ಬಯಸುತ್ತಿದೆ. ಹಿಂದು ದೇವಸ್ಥಾನಗಳ ಮೇಲೆ ಮುಸ್ಲಿಮ್ ದಬ್ಬಾಳಿಕೆಯ ಸಂಕೇತಗಳು ಎಂದು ಅದು ಕರೆಯುವ ಸ್ವರೂಪಗಳನ್ನು ಬದಲಿಸಲಾಗದಿದ್ದರೂ ಪ್ರಚಾರವು ಅದರ ಹಿಂದು ನೆಲೆಯನ್ನು ಇನ್ನಷ್ಟು ಆಕರ್ಷಿಸುತ್ತದೆ.

ಹಳೆಯ ಗಾಯವನ್ನು ಕೆದಕಿದರೆ ಮತ್ತೆ ರಕ್ತ ಹರಿಯುತ್ತದೆ

1991ರಲ್ಲಿ ಬಂದ ಆರಾಧನಾ ಸ್ಥಳಗಳ ಕಾಯ್ದೆಯು ಯಾವುದೇ ಧಾರ್ಮಿಕ ಸ್ಥಳದ ಸ್ವರೂಪವನ್ನು 1947ರಲ್ಲಿ ಇದ್ದ ಸ್ಥಿತಿಯಲ್ಲಿ ಸಂರಕ್ಷಿಸುವುದರಿಂದ ಈ ಎಲ್ಲ ಸಮಸ್ಯೆಗಳಿಗೆ ಉಳಿಗಾಲವಿಲ್ಲ ಎಂದು ಜಾತ್ಯತೀತವಾದಿಗಳು ಗಟ್ಟಿಯಾಗಿ ನಂಬಿಕೊಂಡಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಸಹ ಅಯೋಧ್ಯೆ ತೀರ್ಪಿನಲ್ಲಿ ಈ ಕಾಯ್ದೆಯನ್ನು ಪ್ರಶಂಸಿಸಿದೆ.
ಕಾಯ್ದೆಯು ಏನನ್ನೇ ಹೇಳಲಿ, ಹೇಗಿದ್ದರೂ ದೇವಸ್ಥಾನಗಳು ಮತ್ತು ಮಸೀದಿಗಳ ಕುರಿತು ದಾವೆಗಳನ್ನು ನ್ಯಾಯಾಲಯಗಳು ಅಂಗೀಕರಿಸುತ್ತವೆ ಎನ್ನುವುದು ಸಮಸ್ಯೆಯಾಗಿದೆ. ಆರಾಧನಾ ಸ್ಥಳಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಉದ್ಭವಿಸುವ ಯಾವುದೇ ವಿವಾದವನ್ನು ಮೊಳಕೆಯಲ್ಲಿಯೇ ಚಿವುಟಿಹಾಕುವುದು 1991ರ ಕಾಯ್ದೆಯ ಉದ್ದೇಶವಾಗಿತ್ತು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯವು ತಿಳಿದುಕೊಳ್ಳಬೇಕು.

ಆದಾಗ್ಯೂ ಅದು ಜ್ಞಾನವಾಪಿ ವಿವಾದ ಕುರಿತು ದಾವೆ ಮುಂದುವರಿಯಲು ಅವಕಾಶ ನೀಡಿದೆ ಮತ್ತು ಅದು ಒಂದು ಕಾಲದಲ್ಲಿ ದೇವಸ್ಥಾನವಾಗಿತ್ತೇ ಎನ್ನುವುದನ್ನು ನಿರ್ಧರಿಸಲು ಸಮೀಕ್ಷೆಗಳನ್ನು ನಡೆಸಲು ಸ್ಥಳೀಯ ನ್ಯಾಯಾಲಯಗಳಿಗೆ ಅವಕಾಶ ಕಲ್ಪಿಸಿದೆ.
1991ರ ಕಾಯ್ದೆಯನ್ನು ಸರ್ವೋಚ್ಚ ನ್ಯಾಯಾಲಯವು ಈಗಲೂ ಗೌರವಿಸುತ್ತದೆ (ನಾನು ಹಾಗೆ ಭಾವಿಸಿದ್ದೇನೆ) ಎಂದಿಟ್ಟುಕೊಂಡರೆ ಮಸೀದಿಯನ್ನು ನಿಜಕ್ಕೂ ದೇವಸ್ಥಾನದ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನುವುದನ್ನು ಸಮೀಕ್ಷೆಯು ತೋರಿಸಿದರೆ ಏನಾಗುತ್ತದೆ? 1991ರ ಕಾಯ್ದೆಯು ಆರಾಧನಾ ಸ್ಥಳಗಳ ಸ್ವರೂಪದಲ್ಲಿ ಯಾವುದೇ ಬದಲಾವಣೆಯನ್ನು ನಿಷೇಧಿಸಿರುವುದರಿಂದ ಹಿಂದುಗಳಿಗೆ ಪಾಲಿಗೆ ಅದು ಕಠಿಣ ಎಂಬ ನಿಲುವನ್ನು ನ್ಯಾಯಾಲಯವು ತೆಗೆದುಕೊಳ್ಳುತ್ತದೆಯೇ? ಬಿಜೆಪಿಗೆ ಬೇಕಾಗಿರುವುದು ಅದೇ ಅಲ್ಲವೇ? ನಿಖರವಾಗಿ ಅದು ಏನನ್ನು ಬಯಸುತ್ತಿದೆ?

ಹೀಗಾಗಿ 1991ರ ಕಾಯ್ದೆಯು ಪ್ರತಿಯೊಂದನ್ನೂ ಬದಲಿಸಿದೆ ಅಥವಾ ಇಂತಹ ವಿವಾದಗಳು ಹರಡಲು ಸರ್ವೋಚ್ಚ ನ್ಯಾಯಾಲಯವು ಅವಕಾಶ ನೀಡುವುದಿಲ್ಲ ಎಂದು ಜಾತ್ಯತೀತವಾದಿಗಳು ಭಾವಿಸಿದ್ದರೆ ಅದು ತಪ್ಪುಗ್ರಹಿಕೆಯಾಗುತ್ತದೆ. ಇವೆರಡೂ ಊಹೆಗಳು ತಪ್ಪು ಎಂದು ಪ್ರತಿದಿನ ಸಾಬೀತಾಗುತ್ತಿದೆ.

ನಮ್ಮಲ್ಲಿ ಹೆಚ್ಚಿನವರು ಅಂತರ್ಬೋಧೆಯಿಂದ ನಂಬುವುದನ್ನು ಒಪ್ಪಿಕೊಳ್ಳುವುದು ಎಲ್ಲ ಜಾತ್ಯತೀತವಾದಿಗಳಿಗೆ ಒಳ್ಳೆಯದು. ಹೌದು, ಮಧ್ಯಕಾಲೀನ ದೇವಸ್ಥಾನಗಳನ್ನು ಮಸೀದಿಗಳನ್ನಾಗಿ ಪರಿವರ್ತಿಸಲಾಗಿತ್ತು. ಆದರೆ ಶತಮಾನಗಳ ಬಳಿಕ ನಾವು ಮಾಡುವುದು ಹೆಚ್ಚೇನೂ ಇಲ್ಲ. ನೂರಾರು ವರ್ಷಗಳ ಹಿಂದೆ ಎಸಗಲಾಗಿದ್ದ ಕೃತ್ಯಗಳಿಗೆ ಇಂದಿನ ಮುಸ್ಲಿಮರನ್ನು ದೂಷಿಸುವುದರಲ್ಲಿಯೂ ಯಾವುದೇ ಅರ್ಥವಿಲ್ಲ.

 ಭಾರತೀಯ ಇತಿಹಾಸವು ದಲಿತರನ್ನು ನಾವು ನಡೆಸಿಕೊಂಡಿದ್ದ ರೀತಿ ಸೇರಿದಂತೆ ಅನೇಕ ದುರದೃಷ್ಟಕರ ಅಧ್ಯಾಯಗಳನ್ನು ಒಳಗೊಂಡಿದೆ. ಆದರೆ ತಲೆಮಾರುಗಳಿಂದಲೂ ನಮ್ಮ ಸಮಾಜವು ತಮ್ಮ ಮೇಲೆ ನಡೆಸಿರುವ ದೌರ್ಜನ್ಯಗಳಿಗಾಗಿ ದಲಿತರು ನಮ್ಮ ವಿರುದ್ಧ ರಕ್ತಸಿಕ್ತ ಪ್ರತೀಕಾರವನ್ನು ಬಯಸುತ್ತಿಲ್ಲ. ನಾವೆಲ್ಲರೂ ಒಂದೇ ದೇಶವಾಗಿ ಮುಂದುವರಿಯಲು ಪ್ರಯತ್ನಿಸಬೇಕು.

ಚಾರಿತ್ರಿಕ ಅನ್ಯಾಯದ ಹಳೆಯ ಗಾಯಗಳನ್ನು ಕೆದಕಿದರೆ ಮತ್ತೆ ರಕ್ತ ಹರಿಯುತ್ತದೆ. ಭಾರತಕ್ಕೆ ಹೆಚ್ಚಿನ ರಕ್ತಪಾತವಲ್ಲ,ಉಪಶಮನದ ಅಗತ್ಯವಿರುವ ಸಮಯದಲ್ಲಿ ನೆರೆಹೊರೆಯವರು ಪರಸ್ಪರರ ವಿರುದ್ಧ ತಿರುಗಿಬೀಳುತ್ತಾರೆ. ಜಗತ್ತಿನಲ್ಲಿ ನಮ್ಮ ನ್ಯಾಯಯುತ ಸ್ಥಾನವನ್ನು ಪಡೆಯಲು ಮುಂದೆ ಸಾಗುವ ಬದಲು ನಾವು ನಮ್ಮ ಇತಿಹಾಸದ ಕರಾಳ ಅಧ್ಯಾಯಗಳನ್ನು ಮೆಲುಕು ಹಾಕುತ್ತ ಹಿಂದಕ್ಕೆ ಸಾಗುತ್ತೇವೆ.

ಆದರೆ ಸತ್ಯವನ್ನು ಅರಿತುಕೊಳ್ಳೋಣ. ಈಗ ನಡೆಯುತ್ತಿರುವುದು ಖಂಡಿತವಾಗಿಯೂ ಚುನಾವಣೆಗಳಲ್ಲಿ ಬಿಜೆಪಿಗೆ ಲಾಭವನ್ನು ತರುತ್ತದೆ. ಅದು ಹಿಂದೆಯೂ ಕೆಲಸ ಮಾಡಿದೆ. ಅದು ಮತ್ತೆ ಕೆಲಸ ಮಾಡಲಿದೆ.

Writer - ವೀರ್ ಸಾಂಘ್ವಿ (theprint.in)

contributor

Editor - ವೀರ್ ಸಾಂಘ್ವಿ (theprint.in)

contributor

Similar News