ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದ: ಹೈಕೋರ್ಟ್ ಆದೇಶದ ಪ್ರತಿ ಮಥುರಾ ನ್ಯಾಯಾಲಯಕ್ಕೆ ಸಲ್ಲಿಕೆ

Update: 2022-05-24 15:44 GMT

ಮಥುರಾ (ಉ.ಪ್ರ),ಮೇ 24: ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ನಾಲ್ಕು ತಿಂಗಳುಗಳಲ್ಲಿ ವಿಲೇವಾರಿಗೊಳಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶದ ಪ್ರತಿಯನ್ನು ಮಂಗಳವಾರ ಇಲ್ಲಿಯ ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ತಾತ್ಕಾಲಿಕ ತಡೆಯಾಜ್ಞೆಯನ್ನು ಮತ್ತು ವಿವಾದಕ್ಕೆ ಸಂಬಂಧಿಸಿದ ಎಲ್ಲ ಬಾಕಿ ಪ್ರಕರಣಗಳನ್ನು ಒಟ್ಟಿಗೆ ಸೇರಿಸುವಂತೆ ಕೋರಿರುವ ಅರ್ಜಿಗಳನ್ನು ನಾಲ್ಕು ತಿಂಗಳುಗಳಲ್ಲಿ ಇತ್ಯರ್ಥಗೊಳಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಮೇ 12ರಂದು ಸಂಬಂಧಿಸಿದ ಕೆಳ ನ್ಯಾಯಾಲಯಕ್ಕೆ ನಿರ್ದೇಶ ನೀಡಿತ್ತು.

ಅರ್ಜಿದಾರ ಮನೀಷ್ ಯಾದವ್ ಪರ ವಕೀಲ ದೀಪಕ್ ಶರ್ಮಾ ಅವರು ಉಚ್ಚ ನ್ಯಾಯಾಲಯದ ಆದೇಶದ ಪ್ರತಿಯನ್ನು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಸಲ್ಲಿಸಿದರು. ಜು.1ರಂದು ನಡೆಯಲಿರುವ ಮುಂದಿನ ವಿಚಾರಣೆ ಸಂದರ್ಭ ಆದೇಶದ ಪ್ರತಿಯನ್ನು ಮಂಡಿಸುವಂತೆ ನ್ಯಾಯಾಲಯವು ಸೂಚಿಸಿದೆ ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ತನ್ನನ್ನು ಶ್ರೀಕೃಷ್ಣನ ವಂಶಜ ಎಂದು ಹೇಳಿಕೊಂಡಿರುವ ಲಕ್ನೋ ನಿವಾಸಿ ಯಾದವ್,‌ ಹಿಂದು ಗುಂಪುಗಳು ಹೇಳುವಂತೆ ಕತ್ರಾ ಕೇಶವ ದೇವ ಮಂದಿರದ 13.37 ಎಕರೆ ವಿಸ್ತೀರ್ಣದ ಆವರಣದೊಳಗೆ ಶ್ರೀಕೃಷ್ಣ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ಮಸೀದಿಯನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ. ತನ್ನ ಅರ್ಜಿಯ ಇತ್ಯರ್ಥದಲ್ಲಿ ವಿಳಂಬದಿಂದಾಗಿ ಯಾದವ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News