ದಿಲ್ಲಿಯಲ್ಲಿ 150 ಎಲೆಕ್ಟ್ರಿಕ್ ಬಸ್ ಗಳಿಗೆ ಚಾಲನೆ

Update: 2022-05-24 17:28 GMT

ಹೊಸದಿಲ್ಲಿ, ಮೇ 24: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ 150 ಎಲೆಕ್ಟ್ರಿಕ್ ಬಸ್ಗಳಿಗೆ ಹಸಿರು ನಿಶಾನೆಯನ್ನು ತೋರಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು,ಮುಂದಿನ ಒಂದು ವರ್ಷದೊಳಗೆ ಇಂತಹ 2,000 ಬಸ್ಗಳನ್ನು ಆರಂಭಿಸಲು ತನ್ನ ಸರಕಾರವು ಉದ್ದೇಶಿಸಿದೆ ಎಂದು ತಿಳಿಸಿದರು.

ಮುಂದಿನ 10 ವರ್ಷಗಳಲ್ಲಿ ಎಲೆಕ್ಟ್ರಿಕ್ ಬಸ್ಗಳ ಖರೀದಿಗಾಗಿ ತನ್ನ ಸರಕಾರವು 1,862 ಕೋ.ರೂ.ಗಳನ್ನು ನಿಗದಿಗೊಳಿಸಿದ್ದು,ಇದಕ್ಕಾಗಿ ಕೇಂದ್ರ ಸರಕಾರವು 150 ಕೋ.ರೂ.ಗಳನ್ನು ಒದಗಿಸಿದೆ ಎಂದರು.

ಬಸ್ನಲ್ಲಿ ಸವಾರಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್,ಇಂದು 150 ಬಸ್ ಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ತಿಂಗಳು ಇನ್ನೂ 150 ಎಲೆಕ್ಟ್ರಿಕ್ ಬಸ್ಗಳು ಸೇರ್ಪಡೆಗೊಳ್ಳಲಿವೆ. ಇವು ನಿಮ್ಮ ಬಸ್ಗಳು. ಅವುಗಳ ಬಗ್ಗೆ ಕಾಳಜಿ ವಹಿಸಿ,ಅವುಗಳನ್ನು ಕೊಳಕಾಗಿಸಬೇಡಿ. ಈ ಬಸ್ಗಳು ದಿಲ್ಲಿಯಲ್ಲಿ ವಾಯುಮಾಲಿನ್ಯವನ್ನು ತಗ್ಗಿಸಲಿವೆ ಎಂದು ಜನತೆಯನ್ನು ಆಗ್ರಹಿಸಿದರು.

ಕೇಂದ್ರದ ನೆರವಿನ ಕುರಿತು ಪ್ರಶ್ನಿಸಿದಾಗ ಕೇಜ್ರಿವಾಲ್,‘ನಾವು ಅದಕ್ಕೆ ಋಣಿಯಾಗಿದ್ದೇವೆ ಮತ್ತು ಅವರಿಗೆ ಹೆಗ್ಗಳಿಕೆ ನೀಡುತ್ತೇವೆ. ದಿಲ್ಲಿಯಲ್ಲಿ ಕೆಲಸಗಳಾಗುವುದು ಮುಖ್ಯ’ ಎಂದು ಉತ್ತರಿಸಿದರು. ದಿಲ್ಲಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 7,200 ಬಸ್ಗಳು ರಸ್ತೆಗಳಲ್ಲಿ ಸಂಚರಿಸಲಿವೆ ಎಂದರು.

ಎಲೆಕ್ಟ್ರಿಕ್ ಬಸ್ಗಳ ತಯಾರಿಕೆಯಲ್ಲಿ ವಿಳಂಬವಾಗುವುದರಿಂದ 600-700 ಸಿಎನ್ಜಿ ಬಸ್ಗಳನ್ನು ಖರೀದಿಸಲೂ ತನ್ನ ಸರಕಾರವು ಯೋಜಿಸಿದೆ ಎಂದು ಅವರು ತಿಳಿಸಿದರು. ಜನರು ಇಂದಿನಿಂದ ಮೇ 26ರವರೆಗೆ ಎಲೆಕ್ಟ್ರಿಕ್ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೇಜ್ರಿವಾಲ್ ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News