ಪ್ರಶ್ನಿಸಿದ ಪತ್ರಕರ್ತನಿಗೆ ಕ್ಯಾಮರಾ ಮುಂದೆಯೇ ಹಲ್ಲೆ ನಡೆಸಿದ ಹಿಂದುತ್ವ ಕಾರ್ಯಕರ್ತರು: ವೀಡಿಯೊ ವೈರಲ್‌

Update: 2022-05-24 17:50 GMT
Photo: Screengrab/Twitter.com/Shambund

ಹೊಸದಿಲ್ಲಿ: ವಾರಣಾಸಿಯ ಗ್ಯಾನವಾಪಿ ಮಸೀದಿಯಲ್ಲಿ ದೊರಕಿದೆ ಎನ್ನಲಾದ ʼಶಿವಲಿಂಗʼಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಮಾಡಿದ್ದಾರೆಂಬ ಆರೋಪದಲ್ಲಿ ದಿಲ್ಲಿ ಯುನಿವರ್ಸಿಟಿಯ ಹಿಂದೂ ಕಾಲೇಜಿನ ಪ್ರಾಧ್ಯಾಪಕರನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಗೇಟಿನ ಬಳಿ ಪ್ರತಿಭಟನೆ ನಡೆಸುತ್ತಿದ್ದ ಹಿಂದುತ್ವ ಕಾರ್ಯಕರ್ತರನ್ನು ಮಾತನಾಡಿಸುವ ವೇಳೆ ಪತ್ರಕರ್ತನೋರ್ವನಿಗೆ ಕ್ಯಾಮರಾ ಮುಂದೆಯೇ ದಾಳಿ ನಡೆಸಿದ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದ ವೀಡಿಯೋವೊಂದನ್ನು ಟ್ವಿಟರ್‌ ನಲ್ಲಿ ಶಂಭು ಕುಮಾರ್‌ ಸಿಂಗ್‌ ಎಂಬವರು ಟ್ವೀಟ್‌ ಮಾಡಿದ್ದು, ʼಇದು ಹೇಯಕೃತ್ಯʼ ಎಂದು Newslaundry.com ನ ಕಾರ್ಯನಿರ್ವಾಹಕ ಸಂಪಾದಕ‌ ಅತುಲ್‌ ಚೌರಾಸಿಯ ರಿಟ್ವೀಟ್‌ ಮಾಡಿದ್ದಾರೆ. ಪ್ರಕರಣದ ಕುರಿತು ಮಾತನಾಡುತ್ತಿದ್ದ ವೇಳೆ ನ್ಯಾಶನಲ್‌ ದಸ್ತಕ್‌ ನ ಪತ್ರಕರ್ತ ನಿಧಿ ರತನ್‌ ಎಂಬವರಿಗೆ ಹಲ್ಲೆ ನಡೆಸಲಾಗಿದೆ ಎಂದು ಟ್ವೀಟ್‌ ನಲ್ಲಿ ಉಲ್ಲೇಖಿಸಲಾಗಿದೆ. ಶಿವಲಿಂಗದ ಕುರಿತು ಮಾತನಾಡುತ್ತಿದ್ದ ವೇಳೆ ತಾಳ್ಮೆ ಕಳೆದುಕೊಂಡ ಹಿಂದುತ್ವ ಕಾರ್ಯಕರ್ತರು ಸೇರಿಕೊಂಡು ಕ್ಯಾಮರಾ ಮುಂದೆಯೇ ಪತ್ರಕರ್ತನಿಗೆ ಥಳಿಸುವುದು, ಪೊಲೀಸರು ಕೂಡಾ ಸ್ಥಳದಲ್ಲಿ ಉಪಸ್ಥಿತರಿದ್ದುದು ವೀಡಿಯೊದಲ್ಲಿ ದಾಖಲಾಗಿದೆ. ವೀಡಿಯೊ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News