×
Ad

ಐಪಿಎಲ್: ಗುಜರಾತ್ ಟೈಟಾನ್ಸ್ ಫೈನಲ್‌ಗೆ ಲಗ್ಗೆ

Update: 2022-05-24 23:42 IST
Photo:twitter

 ಕೋಲ್ಕತಾ, ಮೇ 24:   ಡೇವಿಡ್ ಮಿಲ್ಲರ್ (ಔಟಾಗದೆ 68, 38 ಎಸೆತ, 3 ಬೌಂಡರಿ, 5 ಸಿಕ್ಸರ್)ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (ಔಟಾಗದೆ 40 ರನ್, 27 ಎಸೆತ, 5 ಬೌಂಡರಿ ) ಸಾಹಸದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯವನ್ನು 7 ವಿಕೆಟ್ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದೆ.

  ಈಡನ್‌ಗಾರ್ಡನ್ಸ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 189 ರನ್ ಗುರಿ ಬೆನ್ನಟ್ಟಿದ ಗುಜರಾತ್ 19.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಗುಜರಾತ್‌ಗೆ ಕೊನೆಯ ಓವರ್‌ನಲ್ಲಿ ಗೆಲ್ಲಲು 16 ರನ್ ಅಗತ್ಯವಿತ್ತು. ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಮಿಲ್ಲರ್ ರಾಜಸ್ಥಾನ ಪಾಲಿಗೆ 'ಕಿಲ್ಲರ್' ಎನಿಸಿಕೊಂಡರು.

ಗುಜರಾತ್ ಆರಂಭಿಕ ಬ್ಯಾಟರ್ ವೃದ್ದಿಮಾನ್ ಸಹಾ(0)ವಿಕೆಟನ್ನು ಇನಿಂಗ್ಸ್‌ನ 2ನೇ ಎಸೆತದಲ್ಲಿ ಕಳೆದುಕೊಂಡಿತು. ಆಗ ಜೊತೆಯಾದ ಶುಭಮನ್ ಗಿಲ್(35 ರನ್, 21 ಎಸೆತ)ಹಾಗೂ ಮ್ಯಾಥ್ಯೂ ವೇಡ್(35 ರನ್, 30 ಎಸೆತ)ಎರಡನೇ ವಿಕೆಟ್‌ಗೆ 71 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಈ ಇಬ್ಬರು ಔಟಾದ ಬಳಿಕ ಒಂದಾದ ನಾಯಕ ಪಾಂಡ್ಯ ಹಾಗೂ ಮಿಲ್ಲರ್(ಔಟಾಗದೆ 36) 4ನೇ ವಿಕೆಟಿಗೆ ಮುರಿಯದ ಜೊತೆಯಾಟದಲ್ಲಿ 106 ರನ್(61 ಎಸೆತ) ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಪಂದ್ಯದಲ್ಲಿ ಸೋತಿರುವ ರಾಜಸ್ಥಾನ ಎಲಿಮಿನೇಟರ್ ಸುತ್ತಿನಲ್ಲಿ ಗೆಲ್ಲುವ ತಂಡವನ್ನು ಮೇ 27ರಂದು 2ನೇ ಕ್ವಾಲಿಫೈಯರ್‌ನಲ್ಲಿ ಎದುರಿಸಲಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ  ರಾಜಸ್ಥಾನ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್(89 ರನ್, 56 ಎಸೆತ, 12 ಬೌಂಡರಿ, 2 ಸಿ.)ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.


.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News