ಸ್ಪೈಸ್‌ಜೆಟ್‌ ನ ಸಿಸ್ಟಮ್ ಗಳ ಮೇಲೆ ರಾನ್ಸಮ್ವೇರ್ ದಾಳಿ: ಯಾನಗಳ ವಿಳಂಬದಿಂದಾಗಿ ಪ್ರಯಾಣಿಕರ ಪರದಾಟ

Update: 2022-05-25 15:14 GMT
Photo: PTI

ಹೊಸದಿಲ್ಲಿ,ಮೇ 25: ದಿಲ್ಲಿ ವಿಮಾನ ನಿಲ್ದಾಣದಲ್ಲಿಯ ಸಿಸ್ಟಮ್‌ಗಳ ಮೇಲೆ ರಾನ್ಸಮ್‌ವೇರ್ ದಾಳಿ ಮತ್ತು ಯಾನಗಳಲ್ಲಿ ವಿಳಂಬದಿಂದಾಗಿ ಅಗ್ಗದರದ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ಬುಧವಾರ ಮತ್ತೊಮ್ಮೆ ಪ್ರಯಾಣಿಕರ ಆಕ್ರೋಶಕ್ಕೆ ತುತ್ತಾಗಿದೆ.

‘80 ನಿಮಿಷಗಳಿಂದ ಧರ್ಮಶಾಲಾಕ್ಕೆ ತೆರಳುವ ವಿಮಾನದಲ್ಲಿ ಕುಳಿತಿದ್ದೇವೆ,ಇನ್ನೂ ವಿಮಾನವು ಟೇಕ್ ಆಫ್ ಆಗಿಲ್ಲ. ಸರ್ವರ್ ಸಮಸ್ಯೆಯಿದೆ ಮತ್ತು ಇಂಧನಕ್ಕಾಗಿ ಕಾಗದಪತ್ರಗಳಲ್ಲಿ ತೊಂದರೆಯಾಗಿದೆ ಎಂಬಷ್ಟೇ ಮಾಹಿತಿ ನಮಗೆ ಲಭಿಸಿದೆ ’ಎಂದು ಮುದಿತ್ ಶೇಜ್ವಾರ್ ಎನ್ನುವವರು ಟ್ವೀಟಿಸುವುದರೊಂದಿಗೆ ವಿವಾದವು ಆರಂಭಗೊಂಡಿತ್ತು. ಟ್ವೀಟನ್ನು ಸ್ಪೈಸ್ ಜೆಟ್,ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ,ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು.

ಆದರೆ ನಾಲ್ಕು ಗಂಟೆಗಳಾದರೂ ವಿಮಾನ ನಿಂತಲ್ಲಿಂದ ಕದಲಿರಲಿಲ್ಲ. ಶೇಜ್ವಾರ್ ಇನ್ನೆರಡು ಬಾರಿ ಟ್ವೀಟಿಸಿದ ಬಳಿಕ ಉತ್ತರ ನೀಡಿದ್ದ ಸ್ಪೈಸ್ ಜೆಟ್,‘ಹಿಂದಿನ ರಾತ್ರಿ ರಾನ್ಸಮ್‌ವೇರ್ ದಾಳಿಯಿಂದಾಗಿ ನಮ್ಮ ಬುಧವಾರ ಬೆಳಿಗ್ಗೆಯ ಯಾನಗಳು ವಿಳಂಬಗೊಂಡಿವೆ. ನಮ್ಮ ಐಟಿ ತಂಡವು ತೊಂದರೆಯನ್ನು ನಿವಾರಿಸಿದೆ ಮತ್ತು ಯಾನಗಳು ಈಗ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಸಿತ್ತು. ಇನ್ನೂ ಅನೇಕ ಪ್ರಯಾಣಿಕರು ವಿಮಾನ ಯಾನಗಳಲ್ಲಿ ವಿಳಂಬದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸ್ಪೈಸ್ ಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News