ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ: ವ್ಯಾಪಕ ಅಕ್ರಮ, ಭ್ರಷ್ಟಾಚಾರ

Update: 2022-05-25 16:49 GMT

ಉಡುಪಿ : ಕಳೆದೆರಡು ವರ್ಷಗಳ ಸಾಲಿನಲ್ಲಿ ಉಡುಪಿ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ನಡೆದ ಮರಳುಗಾರಿಕೆ ಯಲ್ಲಿ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದ್ದು, ದೊಡ್ಡ ಮಟ್ಟದಲ್ಲಿ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘಟನೆಗಳ ಒಕ್ಕೂಟ ಗಂಭೀರ ಆರೋಪ ಮಾಡಿದೆ.

ಬುಧವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘದ ಕಟಪಾಡಿ ವಲಯ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಗಿನ ಅಡಿಯಲ್ಲಿ ಈ ಎಲ್ಲಾ ಅಕ್ರಮಗಳು ನಡೆದಿದ್ದು, ಇದರಲ್ಲಿ ಇಲಾಖೆಯ ಅಧಿಕಾರಿಗಳ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. 

ಇದರಿಂದ ಕಳೆದೆರಡು ವರ್ಷಗಳಲ್ಲಿ ಮರಳು ಮಾರಾಟ ಹಾಗೂ ಪರವಾನಿಗೆದಾರರು- ಅಧಿಕಾರಿಗಳು ಸೇರಿ ನಡೆಸಿದ ಜಿಪಿಎಸ್ ಬಳಕೆಯ ಕಣ್ಣುಮುಚ್ಚಾಲೆ ಆಟದಲ್ಲಿ ಜಿಲ್ಲಾಡಳಿತಕ್ಕೆ ಹಾಗೂ ಸರಕಾರಕ್ಕೆ ಕೋಟಿ ಕೋಟಿ ರೂ.ಗಳ ವಂಚನೆಯಾಗಿದೆ. ರಾಜಸ್ವದಲ್ಲಿ ವಂಚನೆ ನಡೆದಿದೆ ಎಂದವರು ಹೇಳಿದರು.

‘ನೀವು ಅಕ್ರಮ ಮಾಡಿ ನಮಗೂ ಅದರಲ್ಲಿ ಪಾಲು ಕೊಡಿ’ ಎಂಬುದು ಅದರಲ್ಲಿ ಭಾಗಿಯಾದ ಎಲ್ಲರ ಘೋಷವಾಕ್ಯದಂತಿದೆ ಎಂದು ರಾಘು ಶೆಟ್ಟಿ ತಿಳಿಸಿದರು. ಮರಳು ಧಕ್ಕೆಯಲ್ಲಿ ರೈಟರ್ ಆಗಿದ್ದವರು ಸಹ ಈ ವರ್ಷ ನಾಲ್ಕೈದು ವಾಹನಗಳನ್ನು ಇಟ್ಟುಕೊಂಡಿದ್ದಾರೆ ಎಂದು ಭ್ರಷ್ಚಾಚಾರದ ವಿವಿಧ ಮುಖಗಳನ್ನು ತೆರೆದಿಟ್ಟು ವಿವರಿಸಿದರು.

ಮರಳು ಮಾರಾಟಕ್ಕೆಂದು ಜಿಲ್ಲಾಡಳಿತ ತಯಾರಿಸಿದ ಸ್ಯಾಂಡ್ ಆ್ಯಪ್ ಮೂಲಕವೇ ಜಿಲ್ಲೆಯ ಜನರಿಗೆ ಮೋಸ ಮಾಡಲಾಗಿದೆ. ಅದರ ಮೂಲಕವೇ ಕೋಟ್ಯಾಂತರ ರೂ.ಗಳ ಅಕ್ರಮವೂ ನಡೆಯುತ್ತಿದೆ ಎಂದು ರಾಘು ಶೆಟ್ಟಿ ವಿವರಿಸಿದರು.

ಮೊದಲಿನಿಂದಲೂ ಪ್ರಾಮಾಣಿಕವಾಗಿ ಮರಳು ಸಾಗಾಟ ಮಾಡುತಿದ್ದ ನಾವು, ಜಿಲ್ಲಾಧಿಕಾರಿಯವರ ಮಾತಿಗೆ ಗೌರವ ನೀಡಿ ಅಕ್ರಮ ಮರಳುಗಾರಿಕೆ ಮಾಡುವವರ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಎಲ್ಲರೂ ಸೇರಿ ನಮ್ಮನ್ನೇ ಸಿಲುಕಿಸುವ ಹುನ್ನಾರವನ್ನು ಗಣಿ ಇಲಾಖೆಯ ಅಧಿಕಾರಿಗಳು ನಡೆಸುತಿದ್ದಾರೆ. ಜಿಲ್ಲಾಧಿಕಾರಿಗಳ ಮಾತಿಗೆ ಗೌರವ ಕೊಟ್ಟು ನಾವು ಇಂದು ಎಲ್ಲವನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದರು.

ಮೊದಲಿದ್ದ ಗಣಿ ಇಲಾಖೆಯ ಹಿರಿಯ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತಿದ್ದರು. ಹಿಂದಿನ ಜಿಲ್ಲಾಧಿಕಾರಿಗಳು ಮರಳು ದಂಧೆ ನಡೆಯುತಿದ್ದಾಗ ರಾತೋರಾತ್ರಿ ಅಡ್ಡೆಗೆ ದಾಳಿ ನಡೆಸುತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಇವೆಲ್ಲವೂ ಸಂಪೂರ್ಣವಾಗಿ ನಿಂತಿದ್ದು ಮರಳು ದಂಧೆ ನಿರಾತಂಕವಾಗಿ ನಡೆಯುತ್ತಿದೆ ಎಂದರು.

ಜನರಿಗೆ ಸುಲಭವಾಗಿ ಮರಳು ಸಿಗುವಂತಾಗಲು ಆ್ಯಪ್, ಜಿಪಿಎಸ್ ಎಲ್ಲಾ ಬಳಸುತ್ತಾರೆ. ಆದರೆ ಮರಳು ಮಾಫಿಯಾದ ಮಂದಿ ಅಧಿಕಾರಿಗಳ ಸಹಾಯ ಹಸ್ತದೊಂದಿಗೆ ಅವನ್ನೆಲ್ಲಾ ನಿಷ್ಕೃಯಗೊಳಿಸಿ ಇದ್ಯಾವುದೂ ಇಲ್ಲದೇ ಬೇಕಾಬಿಟ್ಟಿ ಮರಳು ದಂದೆ ನಡೆಸುತಿದ್ದಾರೆ. ಈ ಮೂಲಕ ಜನಸಾಮಾನ್ಯರು ಮೋಸಕ್ಕೊಳಗಾಗುತಿದ್ದಾರೆ ಎಂದು ದೂರಿದರು.

ಜಿಪಿಎಸ್ ಉಲ್ಲಂಘನೆಗೆ ದಂಡ ಹಾಕುವಲ್ಲೂ ದೊಡ್ಡ ಮಟ್ಟದ ಗೋಲ್‌ಮಾಲ್ ನಡೆಯುತ್ತಿದೆ. ಇದರಲ್ಲೂ ಸರಕಾರಕ್ಕೆ ಕೋಟ್ಯಾಂತರ ರೂ.ಗಳ ವಂಚನೆ ನಡೆಯುತ್ತಿದೆ. ಮರಳಿಗಾಗಿ ಇರುವ ಜಿಲ್ಲಾಧಿಕಾರಿ ನೇತೃತ್ವದ ಏಳು ಮಂದಿಯ ಸಮಿತಿಯ ನಿರ್ಣಯವನ್ನೇ ಇವರು ತಿದ್ದುಪಡಿ ಮಾಡಿಕೊಂಡು  ಲೂಟಿ ಹೊಡೆಯುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಸಿರು ಪೀಠ ಮೇ 18ರಂದು ಸಿಆರ್‌ಝಡ್ ಪ್ರದೇಶದಲ್ಲಿ ಈಗಾಗಲೇ ಮರಳುಗಾರಿಕೆಯನ್ನು  ನಿಷೇಧಿಸಿದೆ. ಇದರಿಂದ ಸಾಮಾನ್ಯ ಜನರ ಬದುಕು ಬೀದಿಗೆ ಬಂದುನಿಂತಿದೆ. ಎನ್‌ಜಿಟಿಯ ಕಟ್ಟುನಿಟ್ಟಿನ ನಿಷೇಧದಿಂದ ಕರಾವಳಿಯ ಸಿಆರ್‌ಝಡ್ ಪ್ರದೇಶದ ಮರಳುಗಾರಿಕೆ ಮುಂದೆ ಪ್ರಾರಂಭವಾಗುವುದೇ ಸಂಶಯ. ಇದಕ್ಕೆ ಕೆಲವೇ ಕೆಲವು ಜನರ ದುರಾಶೆ ಹಾಗೂ ಅಧಿಕಾರಿಗಳ ಬೆಂಬಲ ಕಾರಣವೆನಿಸಿದೆ. ಮರಳುಗಳ ಶೇಖರಣೆ ನಿಷೇಧವಾದರೂ ಈಗಲೂ ಜಿಲ್ಲೆಯಲ್ಲಿ ಸಾವಿರಾರು ಲೋಡ್ ಮರಳನ್ನು ಅಕ್ರಮವಾಗಿ ದಾಸ್ತಾನಿರಿಸಲಾಗಿದೆ  ಎಂದು ಅವರು ಹೇಳಿದರು.

ಈವರೆಗೆ 10 ಸಾವಿರ ರೂ.ಗಳಿಗೆ ಸಿಗುತಿದ್ದ ಮರಳಿಗೆ ಈಗ 25ಸಾವಿರ ರೂ. ಎನ್ನುತಿದ್ದಾರೆ. ಇನ್ನೊಂದು ವಾರದಲ್ಲಿ ಇದು 35 ಸಾವಿರ ರೂ.ದಾಟಬಹುದು. ಹೀಗಾದರೆ ಬಡವನೊಬ್ಬ ಜಿಲ್ಲೆಯಲ್ಲಿ ಮನೆ ಕಟ್ಟಲು ಸಾದ್ಯವೇ ಎಂದು ಪ್ರಶ್ನಿಸಿದ  ರಾಘು ಶೆಟ್ಟಿ, ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ನಡೆದಿರುವ ಮರಳುಗಾರಿಕೆಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿರುವುದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದರು. ಈ ಬಗ್ಗೆ ನಾನು ಹೋರಾಟಕ್ಕೂ ಸಿದ್ಧವಿದ್ದೇನೆ ಎಂದರು.

ಇದೇ ಕಾರಣಕ್ಕಾಗಿ ಮಾದ್ಯಮವೊಂದರಲ್ಲಿ ನನ್ನ ವಿರುದ್ಧ ಲಕ್ಷಗಟ್ಟಲೆ ಹಣ ಪಡೆದಿರುವ ಆರೋಪ ಹಾಗೂ ನನ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಉದ್ದೇಶಪೂರ್ವಕ ಸುಳ್ಳು ಆರೋಪವೊಂದನ್ನು ಇಲಾಖೆಯ ಅಧಿಕಾರಿ ಸಂದೀಪ್ ಜಿಯು ಎಂಬವರು ಮಾಡಿದ್ದಾರೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದವರು ಹೇಳಿದರು.

ನನ್ನ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಮಾಡಿರುವ ಸುಳ್ಳು ಆರೋಪದ ಕುರಿತಂತೆ ಇನ್ನೆರಡು ದಿನಗಳಲ್ಲಿ ನನಗೆ ನ್ಯಾಯ ಸಿಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ನಾನು ಪರವಾನಿಗೆದಾರರಿಂದ 30 ಲಕ್ಷರೂ. ಪಡೆದಿದ್ದೇ ಆಗಿದ್ದಲ್ಲಿ, ನನ್ನ ವಿರುದ್ದ ಎಫ್‌ಐಆರ್ ಆಗಿದ್ದಲ್ಲಿ ಅದನ್ನು ಸಾಬೀತು ಪಡೆಸಬೇಕು ಎಂದವರು ಸವಾಲು ಎಸೆದರು.

ಉಡುಪಿ ಜಿಲ್ಲೆಯ ಸಿಆರ್‌ಝಡ್ ಮರಳುಗಾರಿಕೆಯಲ್ಲಿ ದೊಡ್ಡ ಮಟ್ಟದ ಕಾನೂನು ಉಲ್ಲಂಘನೆ, ಕರ್ತವ್ಯ ಲೋಪ ಹಾಗೂ ಅವ್ಯವಹಾರಗಳು ನಡೆದಿ ರುವುದಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಿ ಸಮಗ್ರ ತನಿಖೆಗೊಳಪಡಿಸಬೇಕು. ಇಲಾಖೆಯ ಸಾಕಷ್ಟು ಮಂದಿ ಅಧಿಕಾರಿಗಳು ಅಕ್ರಮ/ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ತಪ್ಪಿತಸ್ಥ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ  ಮೇಲೆ ಕಠಿಣ ಕ್ರಮ ಕೈಗೊಂಡು ನ್ಯಾಯಾಂಗ ಬಂಧನಕ್ಕೊಳಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಚಂದ್ರ ಪೂಜಾರಿ, ರಮೇಶ್ ಶೆಟ್ಟಿ, ಅಶೋಕ್ ಕುಲಾಲ್, ನವೀನ್ ಪಾಲನ್, ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News