ಚೀನಿ ಪ್ರಜೆಗಳಿಗೆ ವೀಸಾ ಪ್ರಕರಣ: ಈ.ಡಿ.ಯಿಂದ ಕಾರ್ತಿ ಚಿದಂಬರಂ,ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲು

Update: 2022-05-25 17:12 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮೇ 25: ಪಿ.ಚಿದಂಬರಂ ಅವರು 2011ರಲ್ಲಿ ಕೇಂದ್ರ ಗೃಹಸಚಿವರಾಗಿದ್ದಾಗ 263 ಚೀನಿ ಪ್ರಜೆಗಳಿಗೆ ವೀಸಾಗಳ ನೀಡಿಕೆಯಲ್ಲಿ ಅವ್ಯವಹಾರಗಳ ಕುರಿತು ತನಿಖೆಗಾಗಿ ಅವರ ಪುತ್ರ ಹಾಗೂ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಈ.ಡಿ)ವು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಇದೇ ಪ್ರಕರಣದಲ್ಲಿ ಸಿಬಿಐ ಇತ್ತೀಚಿಗೆ ದಾಖಲಿಸಿರುವ ಎಫ್‌ಐಆರ್‌ನ ಆಧಾರದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಈ.ಡಿ.ಅಧಿಕಾರಿಗಳು ಬುಧವಾರ ತಿಳಿಸಿದರು. ಪ್ರಕರಣವು ಪಂಜಾಬಿನಲ್ಲಿ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ನಿರ್ಮಿಸುತ್ತಿದ್ದ ವೇದಾಂತ ಸಮೂಹದ ಕಂಪನಿ ತಲವಂಡಿ ಸಾಬೊ ಪವರ್ ಲಿ.(ಟಿಎಸ್ಪಿಎಲ್)ನ ಹಿರಿಯ ಅಧಿಕಾರಿ ವಿಕಾಸ ಮಖರಿಯಾ ಅವರು 263 ಚೀನಿ ಪ್ರಜೆಗಳಿಗೆ ವೀಸಾಗಳನ್ನು ಪಡೆಯಲು ಕಾರ್ತಿ ಮತ್ತು ಅವರ ನಿಕಟವರ್ತಿ ಎಸ್.ಭಾಸ್ಕರರಾಮನ್ ಅವರಿಗೆ 50 ಲ.ರೂ.ಲಂಚ ನೀಡಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದೆ ಎಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಹೇಳಿತ್ತು.
ಕಳೆದ ವಾರ ಚಿದಂಬರಂ ಕುಟುಂಬಕ್ಕೆ ಸೇರಿದ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದ ಸಿಬಿಐ ಭಾಸ್ಕರರಾಮನ್‌ರನ್ನು ಬಂಧಿಸಿತ್ತು.

ಇದು ಕಾರ್ತಿ ಚಿದಂಬರಂ ವಿರುದ್ಧ ಮೂರನೇ ಅಕ್ರಮ ಹಣ ವರ್ಗಾವಣೆ ಪ್ರಕರಣವಾಗಿದೆ. ಈ.ಡಿ.ಅವರ ವಿರುದ್ಧದ ಐಎನ್ಎಕ್ಸ್ ಮೀಡಿಯಾ ಮತ್ತು ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣಗಳ ವಿಚಾರಣೆಯನ್ನು ಕೆಲವು ವರ್ಷಗಳಿಂದ ನಡೆಸುತ್ತಿದೆ. ತಮಿಳುನಾಡಿನ ಶಿವಗಂಗಾ ಕ್ಷೇತ್ರದ ಕಾಂಗ್ರೆಸ್ ಸಂಸದರಾಗಿರುವ ಕಾರ್ತಿ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಮಂಗಳವಾರ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹೇಳಿಕೆಯಲ್ಲಿ ‘ಇದು ಕಿರುಕುಳವಲ್ಲವೇ? ಇದು ಸೇಡಿನ ಕೃತ್ಯವಲ್ಲವೇ? ಅಲ್ಲದಿದ್ದರೆ ಇದು ಏನು ’ಎಂದು ಪ್ರಶ್ನಿಸಿದ್ದಾರೆ.

‘ನನಗೆ ದೇಶದ ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವಿದೆ ಮತ್ತು ನ್ಯಾಯಾಲಯವು ಸತ್ಯದ ಪರವಾಗಿ ನಿಲ್ಲುತ್ತದೆ ಎಂದು ನಂಬಿದ್ದೇನೆ. ನನ್ನ ವಿರುದ್ಧ ದುರುದ್ದೇಶಪೂರಿತ ಮತ್ತು ಸಂಪೂರ್ಣ ಕಪೋಲಕಲ್ಪಿತ ಆರೋಪಗಳನ್ನು ಹೊರಿಸಲು ಕೇಂದ್ರ ಸರಕಾರವು ಮತ್ತೊಮ್ಮೆ ತನ್ನ ಸಂಸ್ಥೆಗಳನ್ನು ಬಳಸಿಕೊಂಡಿರುವುದು ನನಗೆ ಭೀತಿಯನ್ನುಂಟು ಮಾಡಿಲ್ಲ. ನನ್ನ ಮೂಲಕ ನನ್ನ ತಂದೆಯನ್ನು ಗುರಿಯಾಗಿಸಿಕೊಳ್ಳುವ ಅವರ ಪ್ರತಿಯೊಂದೂ ಪ್ರಯತ್ನದ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News