ರಜತ್ ಪಾಟಿದಾರ್ ಭರ್ಜರಿ ಶತಕ, ಲಕ್ನೊಗೆ 208 ರನ್ ಗುರಿ ನೀಡಿದ ಆರ್‌ಸಿಬಿ

Update: 2022-05-25 18:07 GMT
Photo:twitter

  ಕೋಲ್ಕತಾ,ಮೇ 25: ರಜತ್ ಪಾಟಿದಾರ್ ಭರ್ಜರಿ ಚೊಚ್ಚಲ ಶತಕದ(ಔಟಾಗದೆ 112 ರನ್, 54 ಎಸೆತ, 12 ಬೌಂಡರಿ, 7 ಸಿಕ್ಸರ್) ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂುಗಳೂರು ತಂಡ ಐಪಿಎಲ್‌ನ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ಗೆಲುವಿಗೆ 208 ರನ್ ನೀಡಿದೆ.

ಮೆಗಾ ಹರಾಜಿನ ವೇಳೆ ಯಾವ ತಂಡಕ್ಕೂ ಬೇಡವಾಗಿದ್ದ ಮಧ್ಯಪ್ರದೇಶದ ಬಲಗೈ ಬ್ಯಾಟರ್ ರಜತ್ ಟೂರ್ನಿ ಆರಂಭದ ನಂತರ ಬದಲಿ ಆಟಗಾರನಾಗಿ ಆರ್‌ಸಿಬಿಗೆ ಸೇರಿದ್ದರು. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಲು ಪ್ರಮುಖ ಪಾತ್ರವಹಿಸಿದರು.

ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಜಯಿಸಿದ ಲಕ್ನೊ ನಾಯಕ ಕೆ.ಎಲ್.ರಾಹುಲ್ ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಇಳಿಸಿದರು. ನಾಯಕ ಎಫ್ ಡು ಪ್ಲೆಸಿಸ್(0)ವಿಕೆಟನ್ನು ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಕಳೆದುಕೊಂಡ ಆರ್‌ಸಿಬಿ ನೀರಸ ಆರಂಭ ಪಡೆದಿತ್ತು. ಆಗ ಎರಡನೇ ವಿಕೆಟ್‌ಗೆ 66 ರನ್ ಜೊತೆಯಾಟ ನಡೆಸಿದ ರಜತ್ ಪಾಟಿದಾರ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ(25ರನ್, 24 ಎಸೆತ) ತಂಡವನ್ನು ಆಧರಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್ (9ರನ್)ಹಾಗೂ ಮಹಿಪಾಲ್ ಲೊಮ್ರ್‌ರ್ (14ರನ್)ಅಲ್ಪ ಮೊತ್ತಕ್ಕೆ ಔಟಾದರು. ಆಗ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್(ಔಟಾಗದೆ 37 ರನ್, 23 ಎಸೆತ, 5 ಬೌಂಡರಿ, 1 ಸಿಕ್ಸರ್) ಅವರೊಂದಿಗೆ 5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 92 ರನ್ ಸೇರಿಸಿದ ರಜತ್ ತಂಡದ ಮೊತ್ತವನ್ನು 207ಕ್ಕೆ ತಲುಪಿಸಿದರು. ಆರ್‌ಸಿಬಿ ಪರ ರವಿ ಬಿಷ್ಣೋಯಿ(1-45) ದುಬಾರಿ ಬೌಲರ್ ಎನಿಸಿಕೊಂಡರು. ಮುಹ್ಸಿನ್ ಖಾನ್(1-25) ಮಿತವ್ಯಯಿ ಎನಿಸಿದರು. ಕೃನಾಲ್ ಪಾಂಡ್ಯ(1-39) ಹಾಗೂ ಅವೇಶ್ ಖಾನ್(1-44) ತಲಾ ಒಂದು ವಿಕೆಟ್ ಪಡೆದರು.
ಲಕ್ನೊ 108/2
ಎಲಿಮಿನೇಟರ್ ಸುತ್ತಿನಲ್ಲಿ ಗೆಲ್ಲಲು 208 ರನ್ ಬೆನ್ನಟ್ಟಿದ ಲಕ್ನೊ ತಂಡ 13ನೇ ಓವರ್ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತ್ತು. ನಾಯಕ ಕೆ.ಎಲ್.ರಾಹುಲ್(ಔಟಾಗದೆ 47, 42 ಎಸೆತ)ಹಾಗೂ ದೀಪಕ್ ಹೂಡಾ(ಔಟಾಗದೆ 26, 20 ಎಸೆತ)ಮೂರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 67 ರನ್ ಗಳಿಸಿ ತಂಡವನ್ನು ಆಧರಿಸಿದ್ದಾರೆ. ಲಕ್ನೊ ಗೆಲುವಿಗೆ 42 ಎಸೆತಗಳಲ್ಲಿ ಇನ್ನೂ 100 ಅಗತ್ಯವಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News