ಸಾಲ ಪಡೆಯುವ ಮುನ್ನ ಎಚ್ಚರಿಕೆ ಇರಲಿ

Update: 2022-05-25 18:23 GMT

 ಮಾನ್ಯರೇ,

ನಗರಗಳಲ್ಲಿರುವ ಕೆಲವು ಖಾಸಗಿ ಬ್ಯಾಂಕ್‌ಗಳು ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ನಂಬಿಸಿ, ಹಸುಗಳ ಮೇಲೆ, ಮನೆಯ ಮೇಲೆ, ಜಮೀನಿನ ಮೇಲೆ ಹೀಗೆ ಹತ್ತಾರು ವಿಷಯಗಳಿಗೆ ಸಾಲ ನೀಡಿ ಆನಂತರ ಸಾಲದ ಹೆಸರಲ್ಲಿ ಜನರನ್ನು ಹಿಂಸಿಸುವ, ಕುಗ್ಗಿಸುವಂತಹ ಕೆಲಸಗಳನ್ನು ಮಾಡುತ್ತಿವೆ. ಈ ಬ್ಯಾಂಕ್‌ಗಳು ಮೊದಲು ಕಡಿಮೆ ಬಡ್ಡಿಗೆ ಸಾಲ ಕೊಡುವುದಾಗಿ ನಂಬಿಸಿ ಸಾಲವನ್ನು ನೀಡುತ್ತಾರೆ. ಆದರೆ ಸಾಲ ಪಡೆದ ಗ್ರಾಹಕರು, ಮಾಸಿಕ ಕಂತು ಕಟ್ಟುವ ಸಮಯದಲ್ಲಿ ಒಂದು ದಿನ ತಡವಾದರೂ 1 ಸಾವಿರಕ್ಕೂ ಅಧಿಕವಾಗಿ ಹೆಚ್ಚುವರಿ ಹಣವನ್ನು ಕಟ್ಟಬೇಕಾಗುತ್ತದೆ. ಈ ರೀತಿಯ ಅಂಶವನ್ನು ಒಳಗೊಂಡಂತಹ ಬ್ಯಾಂಕ್‌ಗಳು ಪ್ರಾರಂಭದಲ್ಲಿ ಗ್ರಾಹಕರಿಗೆ ನಿಯಮಗಳನ್ನು ಸರಿಯಾಗಿ ತಿಳಿಸುವುದಿಲ್ಲ ಅಥವಾ ತಿಳಿಸಿದರೂ, ಸಾಲ ತೆಗೆದುಕೊಳ್ಳುವ ಭರದಲ್ಲಿ ಜನರು ಈ ಮಾಹಿತಿಯನ್ನು ಕಿವಿಗೆ ಹಾಕಿಕೊಳ್ಳುವಲ್ಲಿ ವಿಫಲರಾಗಿ ಸಾಲವನ್ನು ಮರುಪಾವತಿ ಮಾಡಲು ತಡವಡಿಸುವುದು ಸರ್ವೇಸಾಮಾನ್ಯ. ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಂದ ಬೆಳೆಗಳು ಹಾನಿಗೊಳಗಾದಾಗ ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ತಾವೇ ಸಿಲುಕಿಕೊಳ್ಳುತ್ತಾರೆ. ಹೀಗಿರುವಾಗ ಬ್ಯಾಂಕಿನ ಸಿಬ್ಬಂದಿ ಸಾಲವನ್ನು ಮರು ಪಾವತಿಸಲು ಒತ್ತಾಯಿಸುವುದು, ಮನೆಯ ಹತ್ತಿರ ಬಂದು ಕೂಗಾಡುವುದನ್ನು ಮಾಡುತ್ತಾರೆ. ಇದರಿಂದ ಮನನೊಂದು ರೈತರು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ಆದ್ದರಿಂದ ರೈತರು ಅಥವಾ ಸಾರ್ವಜನಿಕರು ಯಾವುದೇ ರೀತಿಯ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳುವಂತಹ ಸಮಯದಲ್ಲಿ ಬ್ಯಾಂಕುಗಳ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ನಂತರ ಸಾಲವನ್ನು ತೆಗೆದುಕೊಳ್ಳುವುದೋ, ಬೇಡವೋ ಎಂದು ನಿರ್ಧರಿಸಬೇಕಾಗಿದೆ.
 

Writer - -ಮನೋಜ್ ರಾಜ್, ಶಿವಮೊಗ್ಗ

contributor

Editor - -ಮನೋಜ್ ರಾಜ್, ಶಿವಮೊಗ್ಗ

contributor

Similar News