ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ದೊಡ್ಡದು : ಸಚಿವ ರಾಜನಾಥ್ ಸಿಂಗ್

Update: 2022-05-26 15:38 GMT

ಕಾರವಾರ: ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ದೊಡ್ಡದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.

ಗುರುವಾರ ಕಾರವಾರದ ಕದಂಬ ನೌಕಾನೆಲೆಗೆ ಭೇಟಿ ನೀಡಿದ ವೇಳೆ ನೌಕಾ ಸಿಬ್ಬಂದಿ, ಅಧಿಕಾರಿಗಳ ಕುಟುಂಬದವರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ದೇಶಕ್ಕಾಗಿ ತ್ಯಾಗ ಮಾಡುವ ಅವರನ್ನು ಸದಾ ಗೌರವಿಸಬೇಕು ಅಲ್ಲದೆ ಇಂದು ಭಾರತ ಜಗತ್ತಿನ ಪ್ರಭಾವಶಾಲಿ ರಾಷ್ಟ್ರಗಳಲ್ಲಿ ಒಂದಾಗಿದು ಭಾರತಕ್ಕೆ ಜಗತ್ತಿನಲ್ಲಿ ಎಲ್ಲರಿಗಿಂತಲೂ ಹೆಚ್ಚು ಗೌರವ ಸಿಗುತ್ತದೆ ಎಂದರು. ಸೈನಿಕರು ತಮ್ಮ ಕುಟುಂಬವನ್ನು ಮರೆತು ಸದಾ ದೇಶ ಸೇವೆಯಲ್ಲಿ ತೊಡಗಿರುತ್ತಾರೆ. ಹಿಂದೊಮ್ಮೆ ನನಗೆ ಜಲಾಂತರ್ಗಾಮಿಯಲ್ಲಿ ಹೋಗುವ ಅವಕಾಶ ಒದಗಿ ಬಂದಿತ್ತು. ಅಲ್ಲಿ ಜೀವನ ಅತ್ಯಂತ ಕಠಿಣವಾಗಿತ್ತು.  ಬಳಸುವ ನೀರನ್ನು ಮಿತವಾಗಿ ಅಳೆದು ಬಳಸಬೇಕು ಇಂತಹ ಸ್ಥಿತಿಯಲ್ಲಿ ಸೈನಿಕರು ತಿಂಗಳುಗಟ್ಟಲೇ ಕುಟುಂಬದಿಂದ ದೂರವಿರುತ್ತಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.

ವಿಶ್ವದ ಅತಿದೊಡ್ಡ ನೌಕಾಸೇನೆ ಎಂದು ಕರೆಸಿಕೊಳ್ಳುವ ಅಮೆರಿಕದ ನೌಕಾಪಡೆಯು ಭಾರತದ ಸಹಯೋಗ ಹೊಂದಲು ಆಸಕ್ತಿ ತೋರಿದೆ. ಇದು ಭಾರತದ ಪಾಲಿಗೆ ಹೆಮ್ಮೆಯ ವಿಷಯ. ಇತ್ತಿಚೇಗೆ. ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿನ ನೌಕಾಪಡೆಯ ಚೀಪ್ ಅಡ್ಮಿರಲ್ ಭೇಟಿಯಾಗಿದ್ದರು. ಆ ವೇಳೆ ಭಾರತದ  ಸಹಯೋಗ ಹೊಂದುವ ಆಸಕ್ತಿ ಹಂಚಿಕೊಂಡರು. ಪ್ರತಿಯೊಬ್ಬರಲ್ಲಿಯೂ ಸ್ವಾಭಿಮಾನ ಇರುತ್ತದೆ. ವ್ಯಕ್ತಿಗತ ಸ್ವಾಭಿಮಾನ ಮತ್ತು ರಾಷ್ಟ್ರೀಯ ಸ್ವಾಭಿಮಾನ ಬೇರೆ ಬೇರೆ. ನಮ್ಮ ವಿರುದ್ಧ ಮಾತನಾಡಿದರೆ ವ್ಯಕ್ತಿ ಸ್ವಾಭಿಮಾನ ಜಾಗೃತವಾಗುತ್ತದೆ. ನಮ್ಮ ದೇಶದ ವಿರುದ್ಧ ಯಾರಾದರು ಮಾತನಾಡಿದಾಗ ಜಾಗೃತವಾಗುವುದೇ ರಾಷ್ಟ್ರ ಸ್ವಾಭಿಮಾನ ಎಂದರು.

ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ, ಪಶ್ಚಿಮ ವಲಯ ಮುಖ್ಯಸ್ಥ ವೈಸ್ ಅಡ್ಮಿರಲ್ ಅಜೇಂದ್ರ ಬಹದೂರ್ ಸಿಂಗ್, ಕರ್ನಾಟಕ ನೌಕಾ ವಲಯದ ಮುಖ್ಯಸ್ಥ ರಿಯರ್ ಅಡ್ಮಿರಲ್ ಅತುಲ್ ಆನಂದ, ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ನೌಕಾಪಡೆಯ‌ ವಿವಿಧ ಅಧಿಕಾರಿಗಳು ಹಾಜರಿದ್ದರು.

ರಾಜನಾಥ್ ಸಿಂಗ್ ಅವರು ಮೇ 27 ರಂದು ಜಲಾಂತರ್ಗಾಮಿ ಹಡಗಿನಲ್ಲಿ ಸಮುದ್ರದಲ್ಲಿ ಪರ್ಯಟನೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News