×
Ad

ಭಾರತದ 'ಟಾಂಬ್ ಆಫ್ ಸ್ಯಾಂಡ್'ಗೆ ಅಂತರ್ ರಾಷ್ಟ್ರೀಯ ಬೂಕರ್ ಪ್ರಶಸ್ತಿ

Update: 2022-05-27 07:48 IST
ಗೀತಾಂಜಲಿ ಶ್ರೀ

ಹೊಸದಿಲ್ಲಿ: ಭಾರತೀಯ ಲೇಖಕಿ ಗೀತಾಂಜಲಿ ಶ್ರೀ ಮತ್ತು ಅಮೆರಿಕದ ಭಾಷಾಂತರಕಾರ ಡೈಸಿ ರಾಕ್‍ವೆಲ್ ಅವರು ಜನಪ್ರಿಯ ಕಾದಂಬರಿ 'ಟಾಂಬ್ ಆಫ್ ಸ್ಯಾಂಡ್'ಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಗೌರವ ಪಡೆದಿದ್ದಾರೆ.

80 ವರ್ಷದ ಹೀರೊಯಿನ್ ಗಡಿಯನ್ನು ದಾಟುವ ಕಥಾನಕ ಇದಾಗಿದೆ. ಮೂಲತಃ ಹಿಂದಿ ಭಾಷೆಯಲ್ಲಿರುವ ಈ ಕೃತಿ, ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುತ್ತಿರುವ ಭಾರತೀಯ ಭಾಷೆಗಳ ಪ್ರಥಮ ಕೃತಿಯಾಗಿದೆ.

ವಿಶ್ವಾದಾದ್ಯಂತ ಇಂಗ್ಲಿಷ್‍ಗೆ ಭಾಷಾಂತರಗೊಂಡ ಕೃತಿಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. 63 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಹೊಸದಿಲ್ಲಿಯ ಗೀತಾಂಜಲಿ ಶ್ರೀ ಮತ್ತು ರೂಕ್‍ವೆಲ್ ಹಂಚಿಕೊಳ್ಳಲಿದ್ದಾರೆ.

ಭಾಷಾಂತರಕಾರ ಫ್ರಾಂಕ್ ವೈನ್ ಅವರು ನಿರ್ಣಾಯಕ ಮಂಡಳಿಯ ಅದ್ಯಕ್ಷರಾಗಿದ್ದರು. "ಅತ್ಯಂತ ಆಪ್ಯಾಯಮಾನ ಚರ್ಚೆ"ಗಾಗಿ ನಿರ್ಣಾಯಕರು ಈ ಕಾದಂಬರಿಯನ್ನು ಆಯ್ಕೆ ಮಾಡಿದ್ದಾಗಿ ಪ್ರಕಟಣೆ ಹೇಳಿದೆ.

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ವೇಳೆ 1947ರಲ್ಲಿ ಭಾರತ ಉಪಖಂಡ ಎದುರಿಸಿದ ಹಿಂಸಾಚಾರದ ವೇಳೆ 80 ವರ್ಷದ ವಿಧವೆಯೊಬ್ಬರು ತೋರಿದ ಕೆಚ್ಚನ್ನು ಈ ಕೃತಿ ಬಿಂಬಿಸಿದೆ. "ಕೆಚ್ಚು, ನಷ್ಟ ಮತ್ತು ಸಾವು ಹೀಗೆ ಇದು ಗಂಭೀರ ವಿಷಯವನ್ನು ಕೈಗೆತ್ತಿಕೊಂಡಿದೆ" ಎಂದು ವೈನ್ ಬಣ್ಣಿಸಿದ್ದಾರೆ.

ಪೋಲೆಂಡ್‍ನ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಓಗ್ಲಾ ಟೊಕರ್‍ಕ್ರೂಜ್, ಅರ್ಜೆಂಟೀನಾದ ಕ್ಲಾಡಿಯಾ ಪಿನೀರೊ, ದಕ್ಷಿಣ ಕೊರಿಯಾ ಲೇಖಕ ಬೋರಾ ಚಂಗ್ ಸೇರಿದಂತೆ ಅಂತಿಮ ಹಂತಕ್ಕೆ ಆಯ್ಕೆಯಾದ ಐದು ಕೃತಿಗಳನ್ನು ಹಿಂದಿಕ್ಕಿ ಶ್ರೀ ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ. ಲಂಡನ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News