ಮಣಿಪಾಲ ಕೆಎಂಸಿ ಪ್ರಯೋಗಾಲಯಕ್ಕೆ ಎನ್‌ಎಬಿಎಲ್ ಮರುಮಾನ್ಯತೆ

Update: 2022-05-27 13:06 GMT

ಮಣಿಪಾಲ : ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯ  ಸೇವೆಗಳಿಗೆ,  ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳಿಗೆ  ಇರುವ ರಾಷ್ಟ್ರೀಯ ಮಾನ್ಯತೆ ಮಂಡಳಿಯಿಂದ  (ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಎಂಡ್ ಕ್ಯಾಲಿಬ್ರೇಶನ್ ಲ್ಯಾಬೋರೇಟರೀಸ್-ಎನ್‌ಎಬಿಎಲ್) ಮರುಮಾನ್ಯತೆ ದೊರಕಿದೆ. 

ಎನ್‌ಎಬಿಎಲ್ ಎಂಬುದು ಭಾರತದ ಗುಣಮಟ್ಟ ಮಂಡಳಿಯ ಅಂಗ ಸಂಸ್ಥೆಯಾಗಿದೆ. ಶುಕ್ರವಾರ ಮಾಹೆ ಮಣಿಪಾಲದ ಸಹ ಕುಲಾಧಿಪತಿ   ಡಾ. ಎಚ್.ಎಸ್. ಬಲ್ಲಾಳ್, ಕುಲಪತಿ  ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಅವರು ಜಂಟಿಯಾಗಿ  ಕೆಎಂಸಿ ಡೀನ್ ಡಾ.ಶರತ್ ಕೆ.ರಾವ್,  ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ,ಕಸ್ತೂರ್ಬಾ ಆಸ್ಪತ್ರೆ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ. ರವೀಂದ್ರ ಮರಡಿ ಅವರಿಗೆ ಮಾನ್ಯತಾ ಪ್ರಮಾಣಪತ್ರ ಹಸ್ತಾಂತರಿಸಿದರು.

ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಈ ಮಾನ್ಯತೆ ದೊರಕಲು  ಕಾರಣರಾದ ಇಡೀ  ತಂಡವನ್ನು ಡಾ.ಎಚ್.ಎಸ್.ಬಲ್ಲಾಳ್ ಅಭಿನಂದಿಸಿದರು. ನ್ಯಾಕ್ ತಂಡ ಇತ್ತೀಚೆಗೆ ಮಣಿಪಾಲಕ್ಕೆ ಭೇಟಿ ನೀಡಿದ್ದು, ಇಡೀ ಮಾಹೆ ಗುಂಪಿನಲ್ಲಿ ನಾವು ನಿರ್ವಹಿಸುತ್ತಿರುವ ಗುಣಮಟ್ಟದ ಬಗ್ಗೆ ತುಂಬಾ ಪ್ರಶಂಸೆ ವ್ಯಕ್ತಪಡಿಸಿದೆ ಎಂದವರು ಹೇಳಿದರು.

ಮಾಹೆಯ ಕುಲಪತಿ ಲೆ.ಜ.(ಡಾ.)ಎಂ.ಡಿ.ವೆಂಕಟೇಶ್ ಮಾತನಾಡಿ, ಯಾವುದೇ ಸಂಸ್ಥೆಗೆ ಗುಣಮಟ್ಟ ಮತ್ತು ಪ್ರಮಾಣೀಕರಣ ಮಾನ್ಯತೆ ಬಹಳ ಮುಖ್ಯ. ಇದರಲ್ಲಿ ಮಣಿಪಾಲದ ಕೆಎಂಸಿ ಕಾಲೇಜು ಮತ್ತು ಆಸ್ಪತ್ರೆ ಸದಾ ಮುಂಚೂಣಿಯಲ್ಲಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ಎಲ್ಲಾ ಹೊಸ ಸಾಧನೆಗಳು ನಮಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತವೆ ಎಂದರು.

ಮಾಹೆ ಮಣಿಪಾಲದ ಸಹ ಉಪಕುಲಪತಿ  ಡಾ.ಪಿ.ಎಲ್.ಎನ್.ಜಿ.ರಾವ್,  (ವೈದ್ಯಕೀಯ ಮತ್ತು ದಂತ ವಿಜ್ಞಾನ), ಡಾ.ವೆಂಕಟರಾಯ ಪ್ರಭು (ಆರೋಗ್ಯ ವಿಜ್ಞಾನ), ಕುಲಸಚಿವ ಡಾ.ನಾರಾಯಣ ಸಭಾಹಿತ್ ಸಹಿತಎಲ್ಲಾ ಪ್ರಯೋಗಾಲಯಗಳ  ಮುಖ್ಯಸ್ಥರುಮತ್ತು ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿಗಳು  ಉಪಸ್ಥಿತರಿದ್ದರು.

ಮಣಿಪಾಲ ಕೆಎಂಸಿ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ. ರವೀಂದ್ರ ಮರಡಿ ಮಾತನಾಡಿ, ಎನ್‌ಎಬಿಎಲ್ ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯ ಸೇವೆಗಳ ಮಾನ್ಯತೆಯನ್ನು ಇನ್ನೂ ಎರಡು ವರ್ಷ ಅಂದರೆ ೨೦೨೪ರವರೆಗೆ  ನವೀಕರಿಸಿದೆ. ಪ್ರಮಾಣಿತ ಐಎಸ್‌ಒ  ೧೫೧೮೯ ಪ್ರಕಾರ ಎನ್‌ಎಬಿಎಲ್‌ನಿಂದ ೪೦೦ಕ್ಕೂ ಹೆಚ್ಚು ಪರೀಕ್ಷೆಗಳು ಮಾನ್ಯತೆ ಪಡೆದಿವೆ ಎಂದು ವಿವರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News