ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರವನ್ನು ಸಹಿಸಲ್ಲ: ಕೆ.ಮಥಾಯಿ

Update: 2022-05-27 13:38 GMT

ಉಡುಪಿ : ರಾಜ್ಯದ ಬಹುತೇಕ ಸಚಿವರ ಮೇಲೆ ಭ್ರಷ್ಟಾಚಾರ ಆರೋಪವಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಮ್ ಆದ್ಮಿ ಪಕ್ಷವು ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಆಮ್ ಆದ್ಮಿ ಪಾರ್ಟಿಯ ಕರಾವಳಿ ಜಿಲ್ಲೆಗಳ ಉಸ್ತುವಾರಿ ಕೆ.ಮಥಾಯಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ನೇಮಕಾತಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಹಿಂದೆಂದೂ ಕೇಳಿ ಕಂಡರಿಯದ ರೀತಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸರಕಾರ ಹಾಗೂ ಮಂತ್ರಿಗಳ ಮೇಲೆ ಹಿಡಿತ ಇಲ್ಲ ವಾಗಿದೆ. ಒಂದು ಸಚಿವಾಲಯವನ್ನೇ ಲೂಟಿ ಮಾಡಲು ವಹಿಸಿಕೊಡಲಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಜಾತಿ, ಧರ್ಮಗಳ ಹೆಸರಿನಲ್ಲಿ ದೇಶವನ್ನು ಹೊಡೆಯುವ ಕೆಲಸ ಮಾಡುತ್ತಿದೆ. ಇದೇ ರೀತಿ ಮುಂದುವರೆದರೆ ಭಾರತವು ಶ್ರೀಲಂಕಾ ಮಾದರಿ ಯಲ್ಲಿ ಅವನತ್ತಿಯತ್ತ ಹೋಗಬೇಕಾಗುತ್ತದೆ ಎಂದ ಅವರು, ನಮ್ಮ ಪಾರ್ಟಿಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಗಳು ಕಂಡುಬಂದರೆ ಅಂತಹವರನ್ನು ತಕ್ಷಣವೇ ವಜಾಗೊಳಿಸಲಾಗುತ್ತದೆ ಎಂದರು.

ಉಡುಪಿ ಜಿಲ್ಲಾಧ್ಯಕ್ಷ ದಿವಾಕರ್ ಸನಿಲ್ ಮಾತನಾಡಿ, ಉಡುಪಿ ನಗರಸಭೆಗೆ ವಾರಾಹಿಯಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಇನ್ನು ಪೂರ್ಣಗೊಳ್ಳದೆ ಆಮೆಗತಿಯಲ್ಲಿ ಸಾಗುತ್ತಿದೆ. ಒಳಚರಂಡಿ ಸಮಸ್ಯೆ ಇನ್ನು ಬಗೆ ಹರಿದಿಲ್ಲ. ಪ್ರವಾಸೋದ್ಯಮದ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ವಿಫುಲ ಅವಕಾಶ ಇದ್ದರೂ ಸಮಪರ್ಕವಾಗಿ ಯೋಜನೆ ರೂಪಿಸಿಲ್ಲ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ದ.ಕ. ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಹಿರಿಯ ಮುಖಂಡ ಎಸ್.ಆರ್.ಲೋಬೊ, ಸಂಯೋಜಕ ಆಶ್ಲಿ ಕರ್ನೆಲಿಯೊ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News