×
Ad

ವ್ಯವಹಾರದ ಕುರಿತು ದಾಖಲೆ ಸಿಕ್ಕಿಲ್ಲ: ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ

Update: 2022-05-27 20:26 IST
ಸಿದ್ಧಲಿಂಗಪ್ಪ

ಉಡುಪಿ : ಕುಂದಾಪುರದ ಉದ್ಯಮಿ ಕಟ್ಟೆ ಗೋಪಾಲಕೃಷ್ಣ ರಾವ್ ಸಾವಿಗೆ ಮೊಳಹಳ್ಳಿ ಗಣೇಶ್ ಶೆಟ್ಟಿ ಹಾಗೂ ಎಚ್.ಇಸ್ಮಾಯಿಲ್ ದುಷ್ಪ್ರೇರಣೆಯೇ ಕಾರಣ ಎಂಬುದಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆದರೆ ಇವರ ನಡುವಿನ ಹಣದ ವ್ಯವಹಾರದ ಕುರಿತು ಡೆತ್‌ನೋಟ್‌ನಲ್ಲಿ ಬರೆದಿಟ್ಟಿರುವುದು ಬಿಟ್ಟರೆ ಇನ್ನಾವುದೇ ದಾಖಲೆ ಈವರೆಗೆ ಇಲಾಖೆಗೆ ಸಿಕ್ಕಿಲ್ಲ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರ ವ್ಯವಹಾರದ ಕುರಿತು ಇನ್ನಷ್ಟೇ ಪರಿಶೀಲನೆ ನಡೆಸಬೇಕಾಗಿದೆ. ಆತ್ಮಹತ್ಯೆಗೆ ಮೊದಲು ಕಟ್ಟೆ ಗೋಪಾಲಕೃಷ್ಣ, ಗಣೇಶ್ ಶೆಟ್ಟಿ ಜೊತೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಮಾತುಕತೆ ನಡೆಸಿರುವ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದರು.

ಗೋಪಾಲಕೃಷ್ಣ ಪ್ರತಿದಿನ ಗಣೇಶ್ ಶೆಟ್ಟಿಯ ಮನೆಗೆ ಹೋಗಿ ಬರುತ್ತಿದ್ದರು.  ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಗಣೇಶ್ ಶೆಟ್ಟಿ ಕೂಡ ಮನೆ ಯಲ್ಲಿ ಇದ್ದು ಪ್ರಾಣಿಗಳಿಗೆ ಆಹಾರ ಹಾಕುತ್ತಿದ್ದರು. ಆ ಸಮಯದಲ್ಲಿ ತನ್ನ ಸ್ವಂತ ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಣೇಶ್ ಶೆಟ್ಟಿ ಅವರನ್ನು ಕರೆದು ವಿಚಾರಣೆ ಮಾಡಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಶಿಲ್ಪಾ ಆತ್ಮಹತ್ಯೆ: ತಂಡ ರಚನೆ

ಉಪ್ಪಿನಕುದ್ರು ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದಂಪತಿ ಬಂಧನಕ್ಕೆ ಕುಂದಾಪುರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ಧಲಿಂಗಪ್ಪ ತಿಳಿಸಿದ್ದಾರೆ.

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಶಿಲ್ಪಾ, ಆಸ್ಪತ್ರೆಯಲ್ಲಿ ಗುಣಮುಖರಾಗದೆ ಮೃತ ಪಟ್ಟರು. ಆರಂಭದಲ್ಲಿ ಈ ಬಗ್ಗೆ ಯುಡಿಆರ್ ಪ್ರಕರಣ ದಾಖಲಾಗಿತ್ತು. ಬಳಿಕ ಆಕೆಯ ಮೊಬೈಲ್ ಪರೀಶಿಲನೆ ಮಾಡಿದಾಗ ಆಝೀಝ್ ಮತ್ತು ಆಕೆಯ ನಡುವೆ ಇರುವ ಸಂಬಂಧ ಕಂಡುಬಂತು. ಅವರಿಬ್ಬರು ಪ್ರೀತಿಸುತ್ತಿದ್ದು, ಮದುವೆ ಯಾಗುವುದಾಗಿ ನಂಬಿಸಿ ಅಝೀಝ್ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಅಝೀಝ್ ಅಪರಾಧದ ಹಿನ್ನೆಲೆ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News